ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮೂರೂವರೆ ವರ್ಷದ ಬಾಲಕಿ ಬಂಗಾಳಿ, ಹಿಂದಿ ಹಾಗೂ ಇಂಗ್ಲೀಷ್ನಲ್ಲಿ 50 ಕವನವನ್ನ ನೋಡದೇ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ಇದು ಮಾತ್ರವಲ್ಲದೇ ಆರತ್ರಿಕಾ ಘೋಷ್ 20ಕ್ಕೂ ಹೆಚ್ಚು ರವೀಂದ್ರ ಸಂಗೀತ್, ಜಾನಪದ ಗೀತೆ, ಭಕ್ತಿ ಗೀತೆ ಹಾಗೂ ಸಿನಿಮಾ ಹಾಡುಗಳನ್ನ ಹಾಡುತ್ತಾಳೆ. ಈ ಸಾಧನೆಯ ಮೂಲಕ ಈ ಪುಟ್ಟ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ.
ಬಾಲಕಿಯ ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ ಮೇ 15ರಂದು ಇಂಡಿಯಾ ಬುಕ್ ಆಫ್ ರೆರ್ಕಾರ್ಡ್ಸ್ನಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ. ಹಾಗೂ ಜೂನ್ 19ರಂದು ಅಧಿಕಾರಿಗಳು ಈಕೆಯ ಮನೆಗೆ ಬಂದು ಪ್ರಮಾಣ ಪತ್ರ ಹಾಗೂ ಪ್ರಶಸ್ತಿಗಳನ್ನ ನೀಡಿದ್ದಾರೆ. ಆರತ್ರಿಕಾ ತಂದೆ ಸುಧಾಕರ್ ಘೋಷ್ ಶಾಲಾ ಶಿಕ್ಷಕರಾಗಿದ್ದರೆ ತಾಯಿ ತನುಶ್ರೀ ಘೋಷ್ ಗೃಹಿಣಿ ಆಗಿದ್ದಾರೆ.
ಮಗಳ ಸಾಧನೆಯ ಬಗ್ಗೆ ಮಾತನಾಡಿರುವ ಸುಧಾಕರ್, ತಮ್ಮ ಮಗಳಿಗೆ ಉತ್ತಮ ನೆನಪಿನ ಶಕ್ತಿ ಇದೆ. ಈಕೆಗೆ 2 ವರ್ಷ ಪ್ರಾಯದವಳಾಗಿದ್ದಾಗಿನಿಂದಲೇ ಕುಟುಂಬಸ್ಥರ ಎಲ್ಲರ ಹೆಸರನ್ನೂ ನೆನಪಿನಲ್ಲಿ ಇಟ್ಟುಕೊಳ್ತಿದ್ದಳು. ಇದಾದ ಬಳಿಕ ಆಕೆಯ ಪ್ರತಿಭೆಯನ್ನ ಗಮನಿಸಿ ನಾವು ಈ ಸಾಧನೆ ಮಾಡಲು ಪ್ರೇರಣೆ ನೀಡಿದ್ದೇವೆ ಎಂದು ಹೇಳಿದ್ದಾರೆ.