ಸರ್ಕಾರಿ ನೌಕರಿ ಪಡೆಯೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪರಿಶ್ರಮ, ಶ್ರದ್ಧೆ, ಅದೃಷ್ಟ ಇವೆಲ್ಲವೂ ಒಟ್ಟಿಗೆ ಇದ್ದಾಗ ಮಾತ್ರ ಇಂತಹದ್ದೊಂದು ಸಾಧನೆ ಮಾಡಬಹುದು. ಒಂದು ಸರ್ಕಾರಿ ಕೆಲಸವನ್ನ ಪಡೆಯೋದೇ ಕಷ್ಟವಾಗಿರೋ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಒಟ್ಟಿಗೆ ಎರಡೆರಡು ಸರ್ಕಾರಿ ಕೆಲಸ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.
2016ರಿಂದ ಅನಿಲ್ ಕುಮಾರ್ ಎಂಬವರು ಮುಜಾಫರ್ನಗರದ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಈ ಐದು ವರ್ಷಗಳಲ್ಲಿ ಅನಿಲ್ ಕುಮಾರ್ ಕೇವಲ ಶಿಕ್ಷಕನಾಗಿ ಮಾತ್ರವಲ್ಲದೇ ಅಲ್ಲಿಂದ 140 ಕಿ.ಮೀ. ದೂರದಲ್ಲಿರುವ ಮೊರಾದಾಬಾದ್ನಲ್ಲಿ ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸುತ್ತಿದ್ದರು. ಮೊದಲೇ ಪೊಲೀಸ್ ಇಲಾಖೆಯಲ್ಲಿ ನೇಮಕಗೊಂಡಿದ್ದ ಅನಿಲ್ ಕುಮಾರ್ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿಯೂ ಪಾಸ್ ಆಗಿದ್ದರು. ಶಿಕ್ಷಕನಾಗಿ ನೇಮಕವಾದ ಬಳಿಕವೂ ಅನಿಲ್ ತಮ್ಮ ಹಿಂದಿನ ಸರ್ಕಾರಿ ಕೆಲಸಕ್ಕೆ ರಾಜೀನಾಮೆಯನ್ನ ನೀಡಿರಲಿಲ್ಲ. ಬದಲಾಗಿ ಶಿಕ್ಷಕ ವೃತ್ತಿಯನ್ನ ತಾನು ಮಾಡುತ್ತಾ ಪೊಲೀಸ್ ಇಲಾಖೆಯ ತುರ್ತು ಪ್ರತಿಕ್ರಿಯೆ ವಿಭಾಗದ ಕೆಲಸವನ್ನ ತನ್ನ ಸೋದರ ಸಂಬಂಧಿಗೆ ನೀಡಿದ್ದರು.
ಗುರುವಾರ ಮೊರಾದಾಬಾದ್ನ ಠಾಕೂರ್ದ್ವಾರ ಪೊಲೀಸ್ ಠಾಣೆಗೆ ಕರೆಯೊಂದು ಬಂದಿತ್ತು. ಇದರಲ್ಲಿ ಎಸ್ಹೆಚ್ಒ ಸತ್ಯೇಂದ್ರ ಸಿಂಗ್ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು ಪೊಲೀಸ್ ಸಿಬ್ಬಂದಿ ಅನಿಲ್ ಕುಮಾರ್ರ ಗುರುತಿನ ಕಾರ್ಡ್ನ್ನು ಬೇರೊಬ್ಬರು ಬಳಕೆ ಮಾಡ್ತಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ದೂರಿನ ಬಳಿಕ 112 ಘಟಕದ ಸಾರ್ವಜನಿಕ ಪ್ರತಿಕ್ರಿಯೆ ವಾಹನದಲ್ಲಿ ಸೇವೆ ಸಲ್ಲಿಸುತ್ತಿದ್ದ ಅನಿಲ್ರನ್ನ ಕರೆಸಲಾಯ್ತು. ಅನಿಲ್ ಬಳಿ ಸಾಕಷ್ಟು ಪ್ರಶ್ನೆಗಳನ್ನೂ ಕೇಳಲಾಯ್ತು. ಅನಿಲ್ ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ ವೇಳೆಯಲ್ಲಿ ಪೊಲೀಸ್ ಮುಂದೆ ನಿಂತಿರುವ ಅನಿಲ್ಗೂ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಇರುವ ಅನಿಲ್ ಮುಖಕ್ಕೂ ಹೋಲಿಕೆ ಇಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆ ವೇಳೆ ಈತ ಅನಿಲ್ರ ಪತ್ನಿಯ ಅಣ್ಣ ಸುನಿಲ್ ಕುಮಾರ್ ಎಂದು ತಿಳಿದಿದೆ.
ಅನಿಲ್ ಹಾಗೂ ಸುನಿಲ್ 12ನೇ ತರಗತಿಯಿಂದಲೇ ಒಬ್ಬರನ್ನೊಬ್ಬರು ಬಲ್ಲವರಾಗಿದ್ದರು. ಅನಿಲ್ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದಂತೆಯೇ ತನ್ನ ಪೊಲೀಸ್ ಇಲಾಖೆಯ ಕೆಲಸದ ಜಾಗಕ್ಕೆ ಸುನೀಲ್ನ್ನು ಕಳಿಸಿದ್ದ. ತನ್ನ ಗುರುತು ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಅನಿಲ್ ಮೊರಾದಾಬಾದ್ಗೆ ವರ್ಗಾವಣೆ ಕೇಳಿದ್ದ. ಅನಿಲ್ ಜಾಗದಲ್ಲಿ ಸುನೀಲ್ ಮೊರಾದಾಬಾದ್ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ.
ಮುಜಾಫರ ನಗರದಲ್ಲಿ ಶಿಕ್ಷಕನಾಗಿದ್ದ ಅನಿಲ್ 2017ರಲ್ಲಿ ಸುನೀಲ್ ಸಹೋದರಿಯನ್ನ ವಿವಾಹವಾಗಿದ್ದ. ಅನಿಲ್ ತನ್ನ ಸರ್ವೀಸ್ ರಿವಾಲ್ವರ್ನ್ನೂ ಸುನೀಲ್ಗೆ ನೀಡಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಇಬ್ಬರನ್ನೂ ಜೈಲಿಗೆ ಅಟ್ಟಿದ್ದಾರೆ. ಹಾಗೂ ಇವರಿಬ್ಬರ ಈ ಕಳ್ಳಾಟಕ್ಕೆ ಇನ್ನೂ ಯಾರ್ಯಾರ ಪ್ರೇರಣೆ ಇದೆ ಅನ್ನೋದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.