ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್ ನಿದ್ದೆ ಮಾತ್ರೆಯನ್ನ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಂತಾ ಪ್ರಸಾದ್ರನ್ನ ರಾತ್ರಿ 11.30ರ ಸುಮಾರಿಗೆ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಡರಾತ್ರಿ ಬಾಬಾ ಕಾ ಡಾಬಾ ಖ್ಯಾತಿಯ 80 ವರ್ಷದ ಕಾಂತಾ ಪ್ರಸಾದ್ರನ್ನ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಂತಾ ಪ್ರಸಾದ್ ಮದ್ಯ ಹಾಗೂ ನಿದ್ದೆ ಮಾತ್ರೆಯನ್ನ ಸೇವಿಸಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕಾಂತಾ ಪ್ರಸಾದ್ ಪುತ್ರ ಕೂಡ ಇದೇ ಹೇಳಿಕೆಯನ್ನ ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ದಕ್ಷಿಣ ಡಿಸಿಪಿ ಅತುಲ್ ಕುಮಾರ್ ಮಾಹಿತಿ ನೀಡಿದ್ರು.
ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಕಾ ಡಾಬಾದಲ್ಲಿ ಗ್ರಾಹಕರೇ ಇಲ್ಲ ಎಂದು ಅಳುವ ಮೂಲಕ ವೈರಲ್ ಆಗಿದ್ದರು, ಈ ವಿಡಿಯೋ ಬಳಿಕ ಕಾಂತಾ ಪ್ರಸಾದ್ ದಂಪತಿಗೆ ಸಹಾಯದ ಮಹಾಪೂರವೇ ಹರಿದುಬಂದಿತ್ತು.
ಕಾಂತಾ ಪ್ರಸಾದ್ಗೆ ಹೊಸ ರೆಸ್ಟಾರೆಂಟ್ ನಿರ್ಮಾಣಕ್ಕೆ ಸಹಾಯ ಮಾಡಿದ್ದ ಸಾಮಾಜಿಕ ಕಾರ್ಯಕರ್ತರಾದ ಪ್ರಸಾದ್ ಒಟ್ಟು 42 ಲಕ್ಷ ರೂಪಾಯಿ ಸಹಾಯ ಧನ ಪಡೆದಿದ್ದಾರೆ ಎಂದು ಹೇಳಿದ್ದರು. ಆದರೆ ಈ ಆರೋಪಗಳನ್ನ ಕಾಂತಾ ಪ್ರಸಾದ್ ತಳ್ಳಿ ಹಾಕಿದ್ದರು.
ಆದರೆ ಈ ರೆಸ್ಟಾರೆಂಟ್ ಉದ್ಯಮ ಕಾಂತಾ ಪ್ರಸಾದ್ರ ಕೈ ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಪರಿಣಾಮವಾಗಿ ಕಾಂತಾ ಪ್ರಸಾದ್ ತನ್ನ ಹಳೆಯ ಬಾಬಾ ಕಾ ಡಾಬಾಗೆ ವಾಪಸ್ಸಾಗಿದ್ದರು.
ರೆಸ್ಟಾರೆಂಟ್ ಆರಂಭದಲ್ಲಿ ಒಳ್ಳೆಯ ಲಾಭವನ್ನೇ ಗಳಿಸಿತ್ತು. ಆದರೆ ಕ್ರಮೇಣವಾಗಿ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಲೇ ಹೋಯಿತು. ಆದಾಯಕ್ಕಿಂತ ಖರ್ಚು ಹೆಚ್ಚಾಯಿತು. ರೆಸ್ಟಾರೆಂಟ್ ನಡೆಸಲು 1 ಲಕ್ಷ ರೂಪಾಯಿ ಖರ್ಚಾಗುತ್ತಿದ್ದರೆ ಸಂಪಾದನೆ ಮಾತ್ರ 30 ಸಾವಿರ ರೂಪಾಯಿ ಇರುತ್ತಿತ್ತು. ಹೀಗಾಗಿ ಹಳೆಯ ಡಾಬಾಗೆ ವಾಪಸ್ಸಾಗಿದ್ದು ತಾನು ಇದರಲ್ಲೇ ಖುಷಿಯಾಗಿದ್ದೇನೆ ಎಂದು ಕಾಂತಾ ಪ್ರಸಾದ್ ಹೇಳಿದ್ದರು.