ಹೋಟೆಲ್ಗಳಲ್ಲಿ, ಫಾಸ್ಟ್ ಫುಡ್ ಸೆಂಟರ್ಗಳಲ್ಲಿ ಅಡುಗೆ ಕೆಲಸ ಮಾಡೋದು ಅಂದರೆ ಸುಲಭವಲ್ಲ. ಹೊರಗೆ ಸರದಿಯಲ್ಲಿ ಕಾಯುವ ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಅಡುಗೆ ಮಾಡಿಕೊಡೋದು ಅಂದರೆ ಅಷ್ಟೇ ಒತ್ತಡ ಕೂಡ ಇರುತ್ತೆ. ಆದರು ಕೂಡ ರೆಸ್ಟಾರೆಂಟ್ಗಳ ಪ್ರತಿಷ್ಠೆಯನ್ನ ಕಾಪಾಡುವ ಜವಾಬ್ದಾರಿ ಇರೋದ್ರಿಂದ ಎಷ್ಟೇ ಕಷ್ಟವಾದರೂ ಸಹ ಈ ಕೆಲಸವನ್ನ ಶ್ರದ್ಧೆಯಿಂದ ಮಾಡಲೇಬೇಕು.
ಅದರಲ್ಲೂ ಜನನಿಬಿಡ ಪ್ರದೇಶಗಳಲ್ಲಿ ಈ ಸ್ಟೋರ್ಗಳು ಇವೆ ಅಂದರಂತೂ ಕತೆ ಮುಗಿದೇ ಹೋಯ್ತು. ಸಿಬ್ಬಂದಿ ದಿನಂಪೂರ್ತಿ ಬಿಡುವಿಲ್ಲದೇ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿಬಿಡುತ್ತದೆ.
ಈ ಕಷ್ಟದ ನಡುವೆಯೂ ಕೆಲವರು ಕೆಲಸ ಮಾಡೋದನ್ನ ಮುಂದುವರಿಸಿದ್ರೆ ಇನ್ನು ಹಲವರು ಸುಮ್ಮನೆ ಕೆಲಸ ಬಿಟ್ಟು ಹೊರಟುಬಿಡ್ತಾರೆ. ಆದರೆ ಇನ್ನೂ ಕೆಲವರು ತಾವು ಕೆಲಸ ಬಿಡೋಕೂ ಮುನ್ನ ತಮಗಾದ ಕಷ್ಟವನ್ನ ತೋಡಿಕೊಳ್ತಾರೆ.
ಕೆಲಸಕ್ಕೆ ರಾಜೀನಾಮೆ ಕೊಡೋದು ಅಂದರೆ ಅದು ಸುಲಭದ ಕೆಲಸವಲ್ಲ. ನಿಮಗೆ ಇನ್ನೊಂದು ಕೆಲಸ ಕೂಡಲೇ ಸಿಕ್ಕರೆ ಸಮಸ್ಯೆಯಿಲ್ಲ. ಇಲ್ಲವಾದಲ್ಲಿ ಈ ನಿರ್ಧಾರ ಮುಂದೆ ಭಾರೀ ತೊಂದರೆಯನ್ನ ಕೊಡಲೂಬಹುದು.
ಇದೇ ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಕಂಪನಿಗೊಂದು ಮುಖ್ಯ ಸಂದೇಶ ರವಾನಿಸಿದ್ದಾನೆ.
ಕೆಂಟುಕಿಯಲ್ಲಿ ಮೆಕ್ಡೊನಾಲ್ಡ್ನ ಶಾಖೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಲಗತ್ತಿಸಿರುವ ಸಂದೇಶ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಇದರಲ್ಲಿ ಆತ : ನಾವು ಈ ಶಾಖೆಯನ್ನ ಬಂದ್ ಮಾಡುತ್ತಿದ್ದೇವೆ. ಏಕೆಂದರೆ ನಾನಿಲ್ಲ ಕೆಲಸ ಬಿಡುತ್ತಿದ್ದೇನೆ ಹಾಗೂ ಈ ಕೆಲಸವನ್ನ ನಾನು ದ್ವೇಷಿಸುತ್ತೇನೆ ಎಂದು ಬರೆದಿದ್ದಾನೆ. ಈ ಸಂದೇಶ ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಈ ಸಂದೇಶ ನೋಡಿದ ಅನೇಕರು ಸಿಬ್ಬಂದಿಯ ಧೈರ್ಯವನ್ನ ಶ್ಲಾಘಿಸಿದ್ದಾರೆ.