ಕೋವಿಡ್ 19ನಿಂದ ಬಳಲುತ್ತಿರುವ ಅನೇಕರಲ್ಲಿ ನ್ಯುಮೋನಿಯಾ ಕಾಯಿಲೆ ಕೂಡ ಕಾಣಿಸಿಕೊಳ್ತಿದೆ. ಕೋವಿಡ್ ನ್ಯುಮೋನಿಯಾ ಶ್ವಾಸಕೋಶದ ಮೇಲೆ ಸಂಪೂರ್ಣವಾಗಿ ದಾಳಿ ಮಾಡೋದ್ರಿಂದ ಸಾವು ಸಂಭವಿಸುವ ಸಾಧ್ಯತೆ ತುಂಬಾನೇ ಹೆಚ್ಚು.
ಹೀಗಾಗಿ ನ್ಯುಮೋನಿಯಾದಿಂದ ಬಳಲುತ್ತಿರುವ ಕೋವಿಡ್ ರೋಗಿಗಳಿಗೆ ಸೋಂಕು ತಗುಲಿದ ಮೊದಲ ನಾಲ್ಕು ದಿನಗಳು ತುಂಬಾನೇ ನಿರ್ಣಾಯಕ. ಈ ಸಮಯದಲ್ಲೇ ನೀವು ನ್ಯುಮೋನಿಯಾ ಪತ್ತೆ ಮಾಡಿದಲ್ಲಿ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚು. ಹಾಗಿದ್ದಲ್ಲಿ ಮನೆಯಲ್ಲೇ ನಿಮಗೆ ನ್ಯುಮೋನಿಯಾ ಇದೆ ಅನ್ನೋದನ್ನ ಕಂಡುಕೊಳ್ಳೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ :
ಭಾರತೀಯ ವೈದ್ಯಕೀಯ ಸಂಘದ ಕಾರ್ಡಿಯೋಲಾಜಿಸ್ಟ್ ಹಾಗೂ ಜಂಟಿ ಕಾರ್ಯದರ್ಶಿ ಡಾ. ಸಂತೋಷ್ ಗುಪ್ತಾ ನ್ಯುಮೋನಿಯಾ ಪರೀಕ್ಷೆಯನ್ನ ಮನೆಯಲ್ಲೇ ಮಾಡುವ ಬಗ್ಗೆ ಹಂತವನ್ನ ವಿವರಿಸಿದ್ದಾರೆ :
ಎರಡು ಖುರ್ಚಿಗಳನ್ನ 40 ರಿಂದ 50 ಅಡಿ ಅಂತರದಲ್ಲಿ ಇರಿಸಿ.
ನಿಮ್ಮ ಆಕ್ಸಿಜನ್ ಮಟ್ಟವನ್ನ ಪರೀಕ್ಷೆ ಮಾಡಿ.
ಈಗ ಈ ಎರಡು ಖುರ್ಚಿಗಳ ನಡುವೆ ವೇಗವಾಗಿ ನಡೆದಾಡಿ.
ಆರು ನಿಮಿಷಗಳ ಬಳಿಕ ನಿಮ್ಮ ಆಮ್ಲಜನಕ ಮಟ್ಟವನ್ನ ಇನ್ನೊಮ್ಮೆ ಪರೀಕ್ಷೆ ಮಾಡಿ.
ಆರು ನಿಮಿಷಗಳ ಅಂತರದಲ್ಲಿ ನಿಮ್ಮ ಆಕ್ಸಿಜನ್ ಮಟ್ಟ 4 ಪರ್ಸೆಂಟ್ ಕಡಿಮೆಯಾಗಿದೆ ಅಂದರೆ ನಿಮಗೆ ಕೋವಿಡ್ ನ್ಯೂಮೋನಿಯಾ ತಗುಲಿರುವ ಸಾಧ್ಯತೆ ಇದೆ.
ನ್ಯುಮೋನಿಯಾ ಪತ್ತೆ ಹೇಗೆ..?
ಕೋವಿಡ್ 19 ಲಕ್ಷಣಗಳು ಕಾಣಿಸಿಕೊಂಡು 4 ರಿಂದ 5 ದಿನಗಳ ಬಳಿಕ ನಿಮ್ಮ ನಾಡಿ ಮಿಡಿತ 100ಕ್ಕಿಂತ ಹೆಚ್ಚಿದ್ದು, ಜ್ವರ 101 ಫ್ಯಾರನ್ ಹೀಟ್ಗಿಂತ ಕಡಿಮೆ ಇದ್ದು, ಆಮ್ಲಜನಕ ಮಟ್ಟ 94ಕ್ಕಿಂತ ಕಡಿಮೆ ಹಾಗೂ ಸಿಆರ್ಪಿ 10ಕ್ಕಿಂತ ಹೆಚ್ಚಿದ್ದು ನೀವು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ನೀವು ನ್ಯೂಮೋನಿಯಾ ಸಮಸ್ಯೆಯನ್ನ ಹೊಂದಿದ್ದೀರಾ ಎಂದರ್ಥ. ಈ ರೀತಿ ಲಕ್ಷಣಗಳು ಕಂಡು ಬಂದಲ್ಲಿ ನೀವು ಕೂಡಲೇ ಆಸ್ಪತ್ರೆಗೆ ದಾಖಲಾಗೋದು ಒಳ್ಳೆಯದು.