ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಜೂನ್ 7ರ ಬಳಿಕ ಲಾಕ್ ಡೌನ್ ಸಡಿಲಿಕೆ ಮಾಡಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಜೂನ್ 7ಕ್ಕೆ ಮುಕ್ತಾಯವಾಗಲಿದೆ. ಬಳಿಕ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುವುದು ನಿಶ್ಚಿತ. ಆದರೆ ಒಮ್ಮೆಲೇ ಲಾಕ್ ಡೌನ್ ತೆರವುಗೊಳಿಸಲ್ಲ. ಯಾವ ಯಾವ ಭಾಗಗಳಲ್ಲಿ ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡಬೇಕು ಎಂಬ ಬಗ್ಗೆ ತಜ್ಞರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಇನ್ನು ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಗೆ ಔಷಧಿ ಕೊರತೆಯಿರುವುದು ನಿಜ. ಕೇಂದ್ರ ಸರ್ಕಾರಕ್ಕೂ ಔಷಧಿಗಾಗಿ ಬೇಡಿಕೆ ಇಡಲಾಗಿದೆ. ಪರ್ಯಾಯ ಔಷಧಿಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿಸಿದರು.