ಒಂದೇ ದಿನದಲ್ಲಿ ತನಗೆ ಕೋವಿಡ್-19 ಲಸಿಕೆಯ ಎರಡು ಶಾಟ್ಗಳನ್ನು ಹಾಕಿದ್ದಾರೆ ಎಂದು ರಾಜಸ್ಥಾನದ ದೌಸಾ ಎಂಬ ಊರಿನ 43 ವರ್ಷದ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ಇಲ್ಲಿನ ಖೈರ್ವಾಲ್ ಗ್ರಾಮದ ಕಿರಣ್ ಹಾಗೂ ಆಕೆಯ ಪತಿ ರಾಮ್ ಚರಣ್ ಶರ್ಮಾ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಂಗಲ್ ಎಂಬಲ್ಲಿರುವ ಪ್ರಾಥಮಿಕ ಆರೋಗ್ಯ ಘಟಕಕ್ಕೆ (ಪಿಎಚ್ಯು) ಭೇಟಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ತನಗೆ ಜ್ವರ ಹಾಗೂ ಮೈಕೈ ನೋವು ಎಂದು ಮಹಿಳೆ ಹೇಳಿಕೊಂಡ ಬಳಿಕ ಆಕೆಗೆ ತಕ್ಷಣವೇ ಎರಡೂ ಚುಚ್ಚುಮದ್ದುಗಳನ್ನು ಒಮ್ಮೆಲೇ ನೀಡಲಾಗಿದೆ ಎಂದು ಆಕೆ ಹೇಳಿಕೊಂಡಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
ಆದರೆ ಮಹಿಳೆಯ ಈ ಮಾತನ್ನು ಅಲ್ಲಗಳೆದಿರುವ ಲಸಿಕಾ ಕೇಂದ್ರ, ನಿಯಮಾನುಸಾರ ಹೀಗೆ ಮಾಡಲು ಸಾಧ್ಯವೇ ಇಲ್ಲವೆಂದಿದ್ದು, ಒಂದು ಲಸಿಕೆ ಕೊಟ್ಟ ಬಳಿಕ ಆಕೆಗೆ ಪ್ಯಾರಾಸಿಟಮಾಲ್ ಮದ್ದು ತೆಗೆದುಕೊಂಡು ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿತ್ತು ಎಂದು ತಿಳಿಸಿದೆ.
ಘಟನೆ ಸಂಬಂಧ ಮುಖ್ಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿರುವ ಜಿಲ್ಲಾ ಕಲೆಕ್ಟರ್ ಪಿಯುಶ್ ಸಮಾರಿಯಾ, ಲಸಿಕೆ ನೀಡುವ ವೇಳೆ ನಿಯಮಗಳ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.
ಇದಕ್ಕೂ 20 ದಿನಗಳ ಕೆಳಗೆ ನಡೆದಿದ್ದ ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಸಿದ್ಧಾರ್ಥನಗರದ ಆರೋಗ್ಯ ಕಾರ್ಯಕರ್ತರು 20 ಗ್ರಾಮಸ್ಥರಿಗೆ ಮೊದಲ ಹಂತದಲ್ಲಿ ಕೋವಿಶೀಲ್ಡ್ ಲಸಿಕೆ ಕೊಟ್ಟು ಎರಡನೇ ಹಂತದಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಿದ್ದರು.