ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಗುಡುಗಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಕುರಿತಂತೆ ವಿಜಯಪುರದಲ್ಲಿ ಆಕ್ರೋಶ ಹೊರಹಾಕಿದ ಯತ್ನಾಳ್, ಸಿಎಂ ಬಿಎಸ್ವೈ ಮನೆಯಲ್ಲಿ ಕೂರುವ ಬದಲು ಕ್ರಿಯಾಶೀಲರಾಗಿ ಕೆಲಸ ಮಾಡಿ ಎಂದು ಹೇಳಿದ್ರು.
ಜಿಂದಾಲ್ ಕಂಪನಿಗೆ ಜಮೀನು ಕೊಡಬೇಕು ಅಂತಾ ಸಿಎಂ ಸ್ಥಾನದಲ್ಲಿ ಕೂರಬೇಡಿ. ನಿಮಗೆ ಕೆಲಸ ಮಾಡಲು ಸಾಧ್ಯವಾಗ್ತಿಲ್ಲ ಅನ್ನೋದಾದ್ರೆ ದಯಮಾಡಿ ಸಿಎಂ ಸ್ಥಾನದಿಂದ ಕೆಳಗೆ ಇಳಿಯಿರಿ. ವಿಜಯಪುರ ನಗರಕ್ಕೆ ಸರ್ಕಾರ ಸರಿಯಾಗಿ ಲಸಿಕೆಗಳನ್ನ ಪೂರೈಕೆ ಮಾಡುತ್ತಿಲ್ಲ. ರಾಜ್ಯದ ಎಲ್ಲಾ ವರ್ಗಗಳಿಗೆ ಸರ್ಕಾರ ಸಮನಾದ ಪರಿಹಾರವನ್ನ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ಇನ್ನು ವಿಶೇಷ ಆರ್ಥಿಕ ಪ್ಯಾಕೇಜ್ ವಿಚಾರವಾಗಿಯೂ ಮಾತನಾಡಿದ ಯತ್ನಾಳ್, ಲಾಕ್ಡೌನ್ ಘೋಷಣೆಗೂ ಮುನ್ನವೇ ಪರಿಹಾರ ಘೋಷಣೆ ಮಾಡಬೇಕಿತ್ತು. ಕೊರೊನಾ ಹೆಚ್ಚಾದರೆ ಸಿಎಂ ಖುರ್ಚಿಯಲ್ಲೇ ಉಳಿಯಬಹುದು ಎಂಬುದು ಬಿಎಸ್ವೈ ಯೋಚನೆ ಇರಬಹುದು ಎಂದು ಗುಡುಗಿದ್ರು.
ಲಸಿಕೆ ಅಭಾವದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್ನವರು ಹಾಗೂ ಬುದ್ಧಿ ಜೀವಿಗಳು ಮೊದಲು ಈ ಲಸಿಕೆಯನ್ನ ವಿರೋಧ ಮಾಡಿದ್ರು. ಇದು ಮೋದಿ ಲಸಿಕೆ ಅಂತಾ ಅಪಪ್ರಚಾರ ಮಾಡಿದ್ರು. ಹೀಗಾಗಿ ಲಕ್ಷಾಂತರ ಲಸಿಕೆ ಹಾಳಾಗಲು ಕಾಂಗ್ರೆಸ್ನವರು ಕಾರಣ ಎಂದು ಕಿಡಿಕಾರಿದ್ರು.