ಕೊರೊನಾ ಸೋಂಕು ಜನಸಾಮಾನ್ಯರು, ಸೆಲೆಬ್ರಿಟಗಳು, ನಾಯಕರೆನ್ನದೇ ಎಲ್ಲರನ್ನೂ ಕಾಡುತ್ತಿದೆ. ರಾಜಕಾರಣಿಗಳಿಗೆ ಕೊರೊನಾ ಬಂದರೆ ವಿಐಪಿ ಟ್ರೀಟ್ಮೆಂಟ್ ಪಡೀತಾರೆ ಎಂಬ ಆರೋಪಗಳ ಮಧ್ಯೆಯೇ ಮಿಜೋರಾಂನ ಕೊರೊನಾ ಸೋಂಕಿತ ಸಚಿವ ಆಸ್ಪತ್ರೆಯ ನೆಲವನ್ನ ಒರೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮಿಜೋರಾಂನ ಶಕ್ತಿ ಹಾಗೂ ವಿದ್ಯುತ್ ಇಲಾಖೆ ಸಚಿವ ಆರ್. ಲಾಲ್ಜಿರ್ಲಿಯಾನಾ ಆಸ್ಪತ್ರೆಯ ನೆಲ ಒರೆಸುತ್ತಿರುವ ದೃಶ್ಯ ವೈರಲ್ ಆಗಿದೆ.
ಲಾಲ್ಜಿರ್ಲಿಯಾನಾರ ಪತ್ನಿ ಹಾಗೂ ಪುತ್ರ ಕೂಡ ಇದೇ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ ಲಾಲ್ಜಿರ್ಲಿಯಾನ ಈ ರೀತಿ ನೆಲ ಒರೆಸುತ್ತಿರುವ ದೃಶ್ಯ ವೈರಲ್ ಆಗಿರೋದು ಇದೇ ಮೊದಲೇನಲ್ಲ. ಮನೆ ಸೇರಿದಂತೆ ವಿವಿಧ ಕಡೆಯಲ್ಲೂ ನೆಲ ಒರೆಸುವ ಕೆಲಸವನ್ನ ಲಾಲ್ ಮಾಡಿದ್ದಾರೆ.
ನರ್ಸ್ ಹಾಗೂ ವೈದ್ಯರಿಗೆ ಮುಖಭಂಗ ಮಾಡಬೇಕು ಅಂತಾ ನಾನು ಈ ರೀತಿ ನೆಲವನ್ನ ಒರೆಸಲಿಲ್ಲ. ಬದಲಾಗಿ ಇತರರಿಗೆ ಒಂದು ಉದಾಹರಣೆಯಾಗಿ ನಿಲ್ಲಬೇಕು ಎಂದು ಈ ರೀತಿ ಮಾಡಿದೆ ಅಂತಾ ಲಾಲ್ಜಿರ್ಲಿಯಾ ಹೇಳಿದ್ದಾರೆ.
ತಾವಿದ್ದ ಕೊಠಡಿಯ ನೆಲ ಒರೆಸುವಂತೆ ಕೆಲಸಗಾರರಿಗೆ ಲಾಲ್ ಸೂಚನೆ ನೀಡಿದ್ದರು. ಆದರೆ ನೆಲ ಒರೆಸುವವರಿಗೆ ಕೊಠಡಿಗೆ ಬರಲು ಸಾಧ್ಯವಾಗದ ಹಿನ್ನೆಲೆ ತಾವೇ ನೆಲ ಒರೆಸಿಕೊಂಡಿದ್ದಾರೆ.