ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ಕೆಲವೊಂದು ನಿರ್ದೇಶನಗಳನ್ನ ನೀಡಿತ್ತು. ಆದರೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಸದಾನಂದ ಗೌಡ ಸಾಕಷ್ಟು ಲಸಿಕೆ ಉತ್ಪಾದನೆ ಮಾಡೋಕೆ ಆಗದೇ ಇದ್ದರೆ ನಾವೇನು ನೇಣು ಹಾಕಿಕೊಳ್ಳೋದಾ..? ಎಂದು ಪ್ರಶ್ನೆ ಮಾಡಿದ್ದರು. ಸದಾನಂದಗೌಡರ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಡಿ.ವಿ. ಸದಾನಂದಗೌಡರ ಈ ವಿವಾದ ವಿಪಕ್ಷಗಳ ಟೀಕೆಗೆ ಆಹಾರವಾಗಿರೋದ್ರ ಬೆನ್ನಲ್ಲೇ ಇದೀಗ ಡಿವಿಎಸ್ ಪಕ್ಷದ ಕಾರ್ಯಕರ್ತನ ಜೊತೆಗೆ ಮಾತನಾಡುತ್ತಿರುವ ಮತ್ತೊಂದು ಆಡಿಯೋ ವೈರಲ್ ಆಗಿದೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಪಕ್ಷದ ಕಾರ್ಯಕರ್ತ ಕೇಳಿದ ಪ್ರಶ್ನೆಗೆ ಸದಾನಂದ ಗೌಡ ನನಗೂ ರಾಜ್ಯಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮಾತನಾಡಿದ್ದಾರೆ.
ಕರಾವಳಿಯ ಸ್ಥಳೀಯ ಭಾಷೆ ತುಳುವಿನಲ್ಲಿರುವ ವಿಡಿಯೋ ಇದಾಗಿದ್ದು ಇದರಲ್ಲಿ ಪಕ್ಷದ ಕಾರ್ಯಕರ್ತ ಪ್ರಕಾಶ್ ರೈ ರಾಜ್ಯದ ಕಷ್ಟ ಹೇಳಿ ಪ್ಯಾಕೇಜ್ ನೀಡಲು ಯಾಕೆ ಹಿಂದೇಟು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸದಾನಂದ ಗೌಡ, ನಾನು ಕೇಂದ್ರ ಸಚಿವ ನನ್ನ ಬಳಿ ಕೇಳಿದ್ರೆ ನಾನು ಏನು ಮಾಡಲಿ..? ಪ್ಯಾಕೇಜ್ ಬಗ್ಗೆ ನೀವು ರಾಜ್ಯಾಧ್ಯಕ್ಷರು ಹಾಗೂ ಸಿಎಂ ಬಳಿ ಹೋಗಿ ಕೇಳಿ. ನಾವೆಲ್ಲ ಕೇಂದ್ರದ ನಾಯಕರು. ಕೇಂದ್ರ ಸರ್ಕಾರದಿಂದ ಏನನ್ನ ನೀಡಬೇಕೋ ಅದನ್ನೆಲ್ಲ ನೀಡಿ ಆಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಸಮಸ್ಯೆಯನ್ನ ರಾಜ್ಯದ ನಾಯಕರೇ ಸುಧಾರಿಸಬೇಕು. ಪ್ಯಾಕೇಜ್ ಬೇಕು ಎಂದಾದರೆ ನಿಮ್ಮ ಶಾಸಕರು ಹಾಗೂ ಮಂತ್ರಿಗಳ ಬಳಿ ಹೋಗಿ ಕೇಳಿಕೊಳ್ಳಿ. ನೀವು ಯಾರ ಬಳಿ ಹೋಗಿ ಪ್ಯಾಕೇಜ್ ಕೇಳಬೇಕೋ ಅವರ ಬಳಿ ಹೋಗಿ ಕೇಳಿ ಎಂದು ಆಡಿಯೋ ಸಂಭಾಷಣೆಯಲ್ಲಿ ಡಿವಿಎಸ್ ಹೇಳಿದ್ದಾರೆ. ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸದಾನಂದ ಗೌಡರ ಬೇಜವಾಬ್ದಾರಿ ಮಾತಿನ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.