ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಭೀಕರತೆಯ ನಡುವೆಯೇ ಲಸಿಕೆ ಅಭಾವ ಕೂಡ ಉಂಟಾಗಿದೆ. ರಾಜ್ಯದಲ್ಲಿ ಕೊರೊನಾ ಲಸಿಕೆಗಳ ಅಭಾವದ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ಅರವಿಂದ್ ಕುಮಾರ್ ನೇತೃತ್ವದ ಪೀಠ ರಾಜ್ಯದಲ್ಲಿ ಲಸಿಕೆ ಅಭಾವ ಕುರಿತಂತೆ ಆತಂಕ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ 2ನೇ ಡೋಸ್ ಲಸಿಕೆ ವಿತರಣೆಯಲ್ಲಿ ವಿಳಂಬ ಉಂಟಾಗುತ್ತಿದೆ. 18 ರಿಂದ 44 ವರ್ಷದವರಿಗೆ ಹಾಗಿರಲಿ. ಇನ್ನೂ 45 ವರ್ಷ ಮೇಲ್ಪಟ್ಟವರಿಗೇ 2ನೇ ಡೋಸ್ ಲಸಿಕೆ ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿ ಇನ್ನೂ 65 ಲಕ್ಷ ಜನರಿಗೆ ಕೋವಿಡ್ 2ನೇ ಡೋಸ್ ಲಸಿಕೆ ಲಭ್ಯವಾಗಿಲ್ಲ. 1.60 ಲಕ್ಷ ಜನರಿಗೆ 8 ವಾರ ಕಳೆದ್ರೂ ಕೊರೊನಾ ಲಸಿಕೆಯ 2ನೇ ಡೋಸ್ ಸಿಕ್ಕಿಲ್ಲ. 16.63 ಲಕ್ಷ ಜನರಿಗೆ 6 ವಾರಗಳು ಕಳೆದರೂ 2 ಡೋಸ್ ಲಸಿಕೆಯನ್ನ ನೀಡುವಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಸಫಲವಾಗಿದೆ. ಒಟ್ಟು 26 ಲಕ್ಷ ಜನಕ್ಕೆ 2ನೇ ಡೋಸ್ ಲಸಿಕೆಯ ತುರ್ತು ಅಗತ್ಯವಿದೆ ಎಂದು ರಾಜ್ಯ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ವ್ಯಾಕ್ಸಿನೇಷನ್ ಸಂಬಂಧ ನೀಲನಕ್ಷೆ ರಚಿಸಿ. ವ್ಯಾಕ್ಸಿನ್ ಕೊರತೆಯ ಸಮಸ್ಯೆ ದೊಡ್ಡ ಆತಂಕ ಸೃಷ್ಟಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ವ್ಯಾಕ್ಸಿನೇಷನ್ ಅಭಿಯಾನವೇ ವಿಫಲವಾಗಲಿದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.
ಇನ್ನು ಲಾಕ್ಡೌನ್ನಿಂದಾಗಿ ಜನರಿಗೆ ಯಾವುದೇ ತೊಂದರೆಯಾಗದಂತೆ ಆಹಾರ ಭದ್ರತೆ ಒದಗಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಇನ್ನು ಈ ವಿಚಾರವಾಗಿ ರಾಜ್ಯ ಹೈಕೋರ್ಟ್ಗೆ ಮಾಹಿತಿ ನೀಡಿದ ಎ.ಜೆ. ಪ್ರಭುಲಿಂಗ, ಲಾಕ್ಡೌನ್ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ಮೂರು ಹೊತ್ತು ಉಚಿತ ಆಹಾರ ಜೊತೆಗೆ 10 ಕೆಜಿ ಉಚಿತ ಪಡಿತರವನ್ನೂ ನೀಡಲಾಗ್ತಿದೆ ಎಂದು ಮಾಹಿತಿ ನೀಡಿದ್ರು. ಗ್ರಾಮಾಂತರಕ್ಕೂ ಆಹಾರ ಭದ್ರತೆ ಸಿಗುವಂತೆ ಕ್ರಮ ಕೈಗೊಳ್ಳಿ. ಕಳೆದ ಬಾರಿಯಂತೆ ಈ ವರ್ಷವೂ ಸಹ ದಾಸೋಹ ಹೆಲ್ಪ್ಲೈನ್ ಪುನಾರಂಭಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ. ಇನ್ನು ವಿಚಾರಣೆಯನ್ನ ಹೈಕೋರ್ಟ್ ಮೇ 17ನೇ ತಾರೀಖಿಗೆ ಮುಂದೂಡಿದೆ.