ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಆದರೆ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಲೆಕ್ಕಾಚಾರದ ಬಗ್ಗೆ ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.
ಬೇರೆಯವರ ಹೆಂಡತಿಯರ ಲೆಕ್ಕವನ್ನು ಚೆನ್ನಾಗಿ ಹಾಕುವ ನೀವು ಕೊರೊನಾ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಸ್ಮಶಾನಗಳಲ್ಲಿ ಶವಗಳ ಸಾಲು, ಮಾಧ್ಯಮಗಳಲ್ಲಿ ಸಾವಿರ ಸಾವಿನ ಸುದ್ದಿಗಳು, ಆದರೆ ಸರ್ಕಾರ ವೈಫಲ್ಯ ಮುಚ್ಚಲು ಸಾವಿನ ಲೆಕ್ಕ ಮುಚ್ಚಿಡುತ್ತಿದೆ. ಮೋದಿಯ ಚಾಳಿ ಮುಂದುವರೆಸಿದೆ ಎಂದು ಕಿಡಿಕಾರಿದೆ.
ಕೊರೊನಾ ಆರ್ಭಟದ ನಡುವೆ ಸಕಾರಾತ್ಮಕ ಭಾವನೆ ಮೂಡಿಸುವ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ಇದೇ ವೇಳೆ ಕೋವಿಡ್ ಕರ್ಫ್ಯೂ ಜಾರಿಯಿಂದಾಗಿ ಬಡವರ ಕುಟುಂಬಗಳು, ಮಕ್ಕಳು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ‘ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ’ ಎಂಬಂತಾಗಿದೆ ಈ ಸರ್ಕಾರದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಹಸಿವು ಕೊಲ್ಲುತ್ತಿದೆ ಕೂಡಲೇ ಅನ್ನಭಾಗ್ಯದ ಅಕ್ಕಿ 10 ಕೆಜಿಗೆ ಏರಿಸಿ, ಇಲ್ಲದೆ ಹೋದಲ್ಲಿ ಸೋಂಕಿತರ ಸಾವುಗಳೊಂದಿಗೆ ಹಸಿದವರ ಸಾವೂ ಸೇರಲಿದೆ, ಸರ್ಕಾರ ಘೋಷಿಸಿದ ಮಸಣಗಳು ಸಾಲುವುದಿಲ್ಲ ಎಂದು ಸಿಎಂ ಯಡಿಯೂರಪ್ಪನವರನ್ನು ಆಗ್ರಹಿಸಿದೆ.