ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಮಧ್ಯೆಯೇ ನಾಳೆಯಿಂದ ನಡೆಯಬೇಕಿದ್ದ ಕೊರೊನಾ ಲಸಿಕೆ ಅಭಿಯಾನದ ಮೂರನೇ ಹಂತಕ್ಕೆ ಗ್ರಹಣ ಬಡಿದಂತಿದೆ. ಕೊರೊನಾ ಲಸಿಕೆ ಕೊರತೆಯನ್ನು ಮುಂದಿಟ್ಟುಕೊಂಡು ಅನೇಕ ರಾಜ್ಯಗಳು ಮೂರನೇ ಹಂತದ ಲಸಿಕೆ ಅಭಿಯಾನ ಶುರು ಮಾಡಲು ಹಿಂದೇಟು ಹಾಕಿವೆ.
ಕರ್ನಾಟಕದ ಜೊತೆ ದೆಹಲಿ, ರಾಜಸ್ಥಾನ, ಛತ್ತೀಸ್‌ಗಡ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳು ಮೂರನೇ ಹಂತದ ಲಸಿಕೆ ಅಭಿಯಾನವನ್ನು ಸದ್ಯಕ್ಕೆ ಕೈ ಬಿಟ್ಟಿವೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಈಗ ಇಡೀ ದೇಶದಲ್ಲಿ ಏಕಕಾಲದಲ್ಲಿ ಇದನ್ನು ಜಾರಿಗೆ ತರಲಾಗ್ತಿಲ್ಲ.
ಮೇ 1ರಿಂದ ನಡೆಯುವ ಲಸಿಕೆ ಅಭಿಯಾನಕ್ಕೆ ನೋಂದಣಿ ಜೋರಾಗಿ ನಡೆದಿದೆ. ಆದ್ರೆ ದೇಶದಲ್ಲಿ ಲಸಿಕೆ ಕೊರತೆ ಎದುರಾಗಿದ್ದು, 18 ವರ್ಷ ಮೇಲ್ಪಟ್ಟವರಿಗೆ ಸದ್ಯ ಲಸಿಕೆ ಹಾಕುವುದು ಕಷ್ಟವಾಗ್ತಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರವೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಲಸಿಕೆ ಕೊರತೆಯಿಂದಾಗಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಸಾಧ್ಯವಿಲ್ಲ. ಮೇ 3ರ ನಂತ್ರ ಈ ಬಗ್ಗೆ ಆಲೋಚನೆ ಮಾಡಲಾಗುವುದು. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದವರು ಹೇಳಿದ್ದಾರೆ.