ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 25,986 ಹೊಸ ಕೊರೊನಾ ಕೇಸ್ ಹಾಗೂ 368ಕ್ಕೂ ಅಧಿಕ ಕೊರೊನಾ ಸಾವುಗಳನ್ನ ವರದಿ ಮಾಡಿದೆ. ವೈದ್ಯಕೀಯ ಆಮ್ಲಜನಕಗಳ ಕೊರತೆಯಿಂದಾಗಿ ಕೊರೊನಾವನ್ನ ಎದುರಿಸೋದು ಇನ್ನಷ್ಟು ಕಷ್ಟವಾಗುತ್ತಿದೆ.
ಇಂತಹ ಕಠಿಣ ಸಂದರ್ಭದ ನಡುವೆಯೇ ತಂದೆಯ ಚಿಕಿತ್ಸೆಗೆಂದು ವಿಮಾನದಲ್ಲಿ ಆಮ್ಲಜನಕ ಸಾಂದ್ರಕ ತಂದಿದ್ದ ವ್ಯಕ್ತಿಯ ಬ್ಯಾಗನ್ನ ತಪ್ಪಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯ ಎತ್ತುಕೊಂಡು ಹೋಗಿದ್ದಾರೆ.
ಅನ್ವರ್ ಎಂಬವರ ತಂದೆ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅನ್ವರ್ ಆಮ್ಲಜನಕ ಸಿಲಿಂಡರ್ ಬದಲಾಗಿ ಆಮ್ಲಜನಕ ಸಾಂದ್ರಕವನ್ನ ತರಲು ನಿರ್ಧರಿಸಿದ್ರು. ಬೆಂಗಳೂರಿನಲ್ಲಿ ಸಾಂದ್ರಕವನ್ನ ಖರೀದಿ ಮಾಡಿದ ಅನ್ವರ್ ಇಂಡಿಗೋ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ ವಿಮಾನ ನಿಲ್ದಾಣ ತಲುಪಿದಾಗ ಅನ್ವರ್ಗೆ ಆಮ್ಲಜನಕ ಸಾಂದ್ರಕದ ಬ್ಯಾಗ್ ತಮ್ಮ ಬಳಿ ಇಲ್ಲ ಎಂಬ ವಿಚಾರ ಗೊತ್ತಾಗಿದೆ. ಅನ್ವರ್ ಬರೋಬ್ಬರಿ 24 ಗಂಟೆಗಳ ಕಾಲ ಏರ್ಲೈನ್ ಅಧಿಕಾರಿಗಳ ಸಂಪರ್ಕದಲ್ಲಿದ್ದು ಸಾಂದ್ರಕದ ಹುಡುಕಾಟ ನಡೆಸಿದ್ರು.
ಅಂದಹಾಗೆ ಬೆಂಗಳೂರಿನಿಂದ ದೆಹಲಿಗೆ ಸಾಂದ್ರಕ ಸರಿಯಾದ ಸಮಯಕ್ಕೆ ದೆಹಲಿಗೆ ಬಂದಿಳಿದಿದೆ. ಆದರೆ ಅನ್ವರ್ ತೆಗೆದುಕೊಳ್ಳಬೇಕಿದ್ದ ಈ ಬ್ಯಾಗ್ನ್ನು ಮಿಸ್ ಆಗಿ ಸಿಎಸ್ಕೆ ತಂಡದ ಸದಸ್ಯರೊಬ್ಬರು ಕೊಂಡೊಯ್ದಿದ್ದಾರೆ. ನಿನ್ನೆ ದೆಹಲಿ ಅರುಣ್ ಜೆಟ್ಲಿ ಮೈದಾನದಲ್ಲಿ ಪಂದ್ಯವಿದ್ದುದರಿಂದ ಸಿಎಸ್ಕೆ ತಂಡ ಕೂಡ ದೆಹಲಿಗೆ ಬಂದಿಳಿದಿತ್ತು. ಕೊರೊನಾ ಮಾರ್ಗಸೂಚಿಗಳಿಂದಾಗಿ ಆಟಗಾರರು ವೈಯಕ್ತಿಕ ಕೆಲ ಅಗತ್ಯ ಸಾಮಗ್ರಿಗಳನ್ನ ತಮ್ಮ ಬಳಿ ಇಟ್ಟುಕೊಳ್ಳಬೇಕೆಂಬ ನಿಯಮ ಇದೆ. ಹೀಗಾಗಿ ಈ ಎಲ್ಲಾ ಲಗೇಜ್ಗಳು ಹೋಟೆಲ್ ರೂಮ್ಗೆ ಹೋಗಿದ್ದು ಸ್ಯಾನಿಟೈಸ್ ಆಗಿದೆ.
ಏಪ್ರಿಲ್ 27ರ ರಾತ್ರಿ ಸಿಎಸ್ಕೆ ತಂಡದ ಸದಸ್ಯನಿಗೆ ತನ್ನ ಬಳಿ ಒಂದು ಹೆಚ್ಚುವರಿ ಬ್ಯಾಗ್ ಇದೆ ಎಂಬ ವಿಚಾರ ತಿಳಿದಿದೆ. ಏರ್ಪೋರ್ಟ್ಗೆ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಇದು ಅನ್ವರ್ಗೆ ಸೇರಿದ ಬ್ಯಾಗ್ ಎಂಬ ವಿಚಾರ ಬೆಳಕಿಗೆ ಬಂದಿದೆ. ಅನ್ವರ್ ಬರೋಬ್ಬರಿ 36 ಗಂಟೆಗಳ ಬಳಿಕ ಆಮ್ಲಜನಕ ಸಾಂದ್ರಕವನ್ನ ಪಡೆದಿದ್ದಾರೆ. ಕೂಡಲೇ ಆಮ್ಲಜನಕ ಸಾಂದ್ರಕವನ್ನ ಸಂಗ್ರಹಿಸಿದ ಇಂಡಿಗೋ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ರೋಗಿಗೆ ಆಮ್ಲಜನಕ ಸಾಂದ್ರಕ ತಲುಪಿಸಿದ್ದಾರೆ.