ಮೈಸೂರು: ಮೈಸೂರು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ರೆಮ್ ಡೆಸಿವಿರ್ ನಕಲಿ ಔಷಧಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
34 ವರ್ಷದ ಗಿರಿಶ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಆತನಿಂದ 32 ಬಾಟಲಿ ನಕಲಿ ರೆಮ್ ಡೆಸಿವಿರ್ ಮತ್ತು 2.82 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಗಿರೀಶ್ 800 ಕ್ಕೂ ಅಧಿಕ ಬಾಟಲಿಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರಾಟ ಮಾಡಿದ ಶಂಕೆ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಇತರೆ ಆರೋಪಿತರಾದದ ಶಿವಪ್ಪ, ಮಂಗಳಾ, ಪ್ರಶಾಂತ್ ಮತ್ತು ಮಂಜುನಾಥ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮೈಸೂರಿನ ಪ್ರಮುಖ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ ತನ್ನ ಮನೆಯಲ್ಲಿ ರೆಮ್ ಡೆಸಿವಿರ್ ಖಾಲಿ ಬಾಟಲಿಗಳಿಗೆ ಬೇರೆ ಔಷಧ ತುಂಬಿಸುತ್ತಿದ್ದ. ಅದನ್ನು ಮೆಡಿಕಲ್ ರೆಪ್ರೆಸೆಂಟೇಟಿವ್ ಗಳಾದ ಮಂಜುನಾಥ್ ಮತ್ತು ಪ್ರಶಾಂತ್ ಅವರಿಗೆ ನೀಡಿ ಬೇಡಿಕೆ ಇರುವ ಕಡೆ ಮಾರಾಟ ಮಾಡಿಸುತ್ತಿದ್ದ.
ಪ್ರಮುಖ ಆಸ್ಪತ್ರೆಯೊಂದರ ಭದ್ರತಾ ಸಿಬ್ಬಂದಿಯಾಗಿರುವ ಶಿವಪ್ಪ ಮತ್ತು ಸ್ವಚ್ಛತಾ ಸಿಬ್ಬಂದಿಯಾಗಿರುವ ಮಂಗಳಾ ಬಳಸಿ ಬಿಸಾಡಿದ ರೆಮ್ ಡೆಸಿವಿರ್ ಖಾಲಿ ಬಾಟಲಿಗಳನ್ನು ಈತನಿಗೆ ತಂದುಕೊಡುತ್ತಿದ್ದರು ಎನ್ನಲಾಗಿದೆ.