ಬೆಂಗಳೂರು: 2021 -22 ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಪಡಿತರ ಚೀಟಿ ಕಡ್ಡಾಯ ಮಾಡಲಾಗಿದೆ. ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಪೋಷಕರಲ್ಲಿ ಗೊಂದಲ ಉಂಟಾಗಿದೆ.
ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಕುಟುಂಬ ಗುರುತಿನ ಸಂಖ್ಯೆ ಅಳವಡಿಸಲು ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ ಪಡಿತರ ಚೀಟಿ ಇಲ್ಲದವರಿಗೆ ಸಮಸ್ಯೆ ಎದುರಾಗಿದ್ದು, ರಾಜ್ಯಾದ್ಯಂತ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವಂತಾಗಿದೆ.
ರಾಜ್ಯದಲ್ಲಿ ಸುಮಾರು 50 ಲಕ್ಷ ವಿದ್ಯಾರ್ಥಿಗಳ ಕುಟುಂಬ ಗುರುತಿನ ಸಂಖ್ಯೆಯಾಗಿ ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಲಾಗಿದೆ. ಉಳಿದ ವಿದ್ಯಾರ್ಥಿಗಳ ಕುಟುಂಬ ಗುರುತಿನ ಸಂಖ್ಯೆಯಾಗಿ ಪೋಷಕರ ಪಡಿತರ ಚೀಟಿ ಪಡೆದು ತಂತ್ರಾಂಶದಲ್ಲಿ ಅಳವಡಿಕೆ ಮಾಡುವಂತೆ ತಿಳಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ಕುಟುಂಬ ಗುರುತಿನ ಸಂಖ್ಯೆಗಾಗಿ ಆಧಾರ್ ಸಂಖ್ಯೆಯನ್ನು ಪರಿಗಣಿಸಲಾಗುತ್ತಿತ್ತು. ಆಧಾರ್ ಕಡ್ಡಾಯಗೊಳಿಸದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕುಟುಂಬದ ಗುರುತಿನ ಸಂಖ್ಯೆಗೆ ಪಡಿತರ ಚೀಟಿ ಪರಿಗಣಿಸಲು ಇ-ಆಡಳಿತ ಇಲಾಖೆ ತಿಳಿಸಿದೆ ಎಂದು ಹೇಳಲಾಗಿದೆ.
ಏಕಾಏಕಿ ಪಡಿತರ ಚೀಟಿ ಕಡ್ಡಾಯ ಮಾಡಿರುವುದರಿಂದ ಪೋಷಕರಿಗೆ ಗೊಂದಲವಾಗಿದೆ. ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನು ಪಡಿತರ ವಿತರಣೆ ಯೋಜನೆಗೆ ನೀಡುತ್ತಿದ್ದು, ಈಗ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಪಡಿತರ ಚೀಟಿ ಪಡೆದುಕೊಳ್ಳಬೇಕಿದೆ.
ಈ ಬೆಳವಣಿಗೆಯಿಂದ ಒಮ್ಮೆಲೆ ಭಾರಿ ಸಂಖ್ಯೆಯ ಜನರಿಗೆ ಪಡಿತರ ಚೀಟಿ ನೀಡಬೇಕಾಗುತ್ತದೆ. ಅಲ್ಲದೆ, ಪಡಿತರ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಲಾಗಿದೆ.