ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ ತಮ್ಮ ಆತ್ಮಚರಿತ್ರೆಯ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೊರೊನಾ ವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಬರೆದಿರುವ ಆತ್ಮಚರಿತ್ರೆ ‘ಸ್ಟೋರೀಸ್ ಐ ಮಸ್ಟ್ ಟೆಲ್’ ನಲ್ಲಿ ಕೆಲ ಆಘಾತಕಾರಿ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ.
ಈ ಪುಸ್ತಕದಲ್ಲಿ 74 ವರ್ಷದ ಹಿರಿಯ ನಟ ಯಾರಿಗೂ ತಿಳಿದಿರದ ಕೆಲ ನಿಗೂಢ ವಿಚಾರಗಳ ಬಗ್ಗೆ ಬರೆದಿದ್ದಾರೆ. ಅದರಲ್ಲಿ ತಮ್ಮ ಮಾಜಿ ಗೆಳತಿ ಪರ್ವೀನ್ರ ಸಾವಿನ ಬಗ್ಗೆ ಕೆಲ ಆಘಾತಕಾರಿ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಪರ್ವೀನ್ 2005 ಜನವರಿ 22ರಲ್ಲಿ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ನಾಲ್ಕು ದಿನಗಳಿಂದ ಮನೆಯ ಬಾಗಿಲಲ್ಲೇ ಇದ್ದ ದಿನಪತ್ರಿಕೆ ಹಾಗೂ ಹಾಲಿನ ಪ್ಯಾಕೆಟ್ ಒಳಗೆ ತೆಗೆದುಕೊಂಡು ಹೋಗದೇ ಇದ್ದ ಕಾರಣ ಶಂಕೆ ಬಂದು ಪೊಲೀಸರು ಬಾಗಿಲು ಒಡೆದ ವೇಳೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿತ್ತು.
ಕೂಪರ್ ಆಸ್ಪತ್ರೆ ನೀಡಿರುವ ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಆಕೆಯ ಹೊಟ್ಟೆಯಲ್ಲಿ ಯಾವುದೇ ವಿಷಕಾರಿ ಆಹಾರ ಪತ್ತೆಯಾಗಿಲ್ಲ. ಆದರೆ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ. ಬಹುಶಃ ಎರಡ್ಮೂರು ದಿನಗಳಿಂದ ಹೊಟ್ಟೆಗೆ ಏನು ತೆಗೆದುಕೊಳ್ಳದೇ ಇರೋದ್ರಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು.
ಪರ್ವೀನ್ ಅಂತ್ಯಕ್ರಿಯೆ ವೇಳೆ ಹಾಜರಿದ್ದ ಕಬೀರ್ ಈ ವಿಚಾರಗಳ ಬಗ್ಗೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಆಕೆ ಸತ್ತು ನಾಲ್ಕು ದಿನಗಳ ಬಳಿಕ ಜುಹು ನಿವಾಸದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಒಂದು ಕಾಲದಲ್ಲಿ ಲಕ್ಷಾಂತರ ಮಂದಿಯ ಹೃದಯ ಕದ್ದಿದ್ದ ನಟಿ ಗ್ಯಾಂಗ್ರೀನ್ನಿಂದ ಕಾಲು ಕಳೆದುಕೊಂಡಿದ್ರು. ಆಕೆಯ ಹಾಸಿಗೆಯ ಬಳಿ ವ್ಹೀಲ್ ಚೇರ್ ಇತ್ತು. ಆಕೆ ದುರಂತವಾಗಿ ಅಂತ್ಯ ಕಂಡಿದ್ದಳು. ಆಕೆಯನ್ನ ಪ್ರೀತಿಸಿದ್ದ ಮಹೇಶ್, ಡ್ಯಾನಿ ಹಾಗೂ ನಾನು ಅಂತ್ಯಕ್ರಿಯೆಯಲ್ಲಿ ಹಾಜರಿದ್ದೆವು.
ಆಕೆಯನ್ನ ಇಸ್ಲಾಮಿಕ್ ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಲಾಯ್ತು. ಆಕೆಯ ದೇಹವನ್ನ ಕುಟುಂಬಸ್ಥರ ಜೊತೆ ನಾವೇ ಸಾಗಿಸಿದ್ದೆವು ಎಂದು ಬರೆದಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಕಬೀರ್ ತಮ್ಮ ಪತ್ನಿ ಜೊತೆ ಮುಂಬೈನಲ್ಲಿ ವಾಸವಿದ್ದಾರೆ. ಈಗಲೂ ನಟನೆ, ಕಂಠದಾನ ಹಾಗೂ ಡಾಕ್ಯೂಮೆಂಟರಿಗಳನ್ನ ಮಾಡುತ್ತಾರೆ. ಸಾಮಾಜಿಕ ಕಾರ್ಯಗಳ ಮೂಲಕವೂ ಕಬೀರ್ ಸುದ್ದಿಯಲ್ಲಿ ಇರ್ತಾರೆ.