ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಲಸಿಕೆಯ ಹೋರಾಟ ಮುಂದುವರಿದಿದ್ದು ಈ ಹೋರಾಟಕ್ಕೆ ಇದೀಗ ಮತ್ತೊಂದು ಬಲ ಸೇರಿದೆ. ಇಷ್ಟು ದಿನಗಳ ಕಾಲ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನ ನೀಡುತ್ತಿದ್ದ ಕೇಂದ್ರ ಸರ್ಕಾರ ಇದೀಗ ದೇಶದಲ್ಲಿ ಮತ್ತೊಂದು ಲಸಿಕೆಯ ಬಳಕೆಗೆ ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ಔಷಧ ನಿಯಂತ್ರಣ ಪ್ರಾಧಿಕಾರ ಈ ಸಂಬಂಧ ಸಭೆ ನಡೆಸಿದ್ದು ಸಭೆಯಲ್ಲಿ ರಷ್ಯಾದ ʼಸ್ಪುಟ್ನಿಕ್ ವಿʼ ಲಸಿಕೆಯನ್ನ ದೇಶದಲ್ಲಿ ತುರ್ತು ಬಳಕೆ ಮಾಡಲು ಅನುಮೋದನೆ ನೀಡಿದೆ.
ಸ್ಪುಟ್ನಿಕ್ ವಿ ಲಸಿಕೆಯನ್ನ ಭಾರತದಲ್ಲಿ ಬಳಕೆಗೆ ತುರ್ತು ಅನುಮೋದನೆ ಕೋರಿ ಡಾ. ರೆಡ್ಡೀಸ್ ಲ್ಯಾಬೋರೇಟರಿ ಅನುಮತಿ ಕೇಳಿತ್ತು. ರಷ್ಯಾದ ಈ ಲಸಿಕೆಯನ್ನ ಭಾರತ, ರಷ್ಯಾ, ಯುಎಇ ಸೇರಿದಂತೆ ವಿವಿಧೆಡೆ ಪ್ರಾಯೋಗಿಕ ಪರೀಕ್ಷೆಯನ್ನ ನಡೆಸಲಾಗಿದೆ. ಇಲ್ಲಿಯವರೆಗೆ ಕೊರೊನಾ ವಿರುದ್ಧ 91.6 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದೆ. ರಷ್ಯಾ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಜೊತೆ ಡಾ. ರೆಡ್ಡಿಸ್ ಸಹಭಾಗಿತ್ವ ಹೊಂದಿದೆ.
ರಷ್ಯಾ ಸ್ಪುಟ್ನಿಕ್ ವಿ ಲಸಿಕೆಯ ಸಾರ್ವಜನಿಕ ಬಳಕೆಗೆ ಆಗಸ್ಟ್ ತಿಂಗಳಲ್ಲಿ ನೋಂದಾಯಿಸಿತ್ತು.
ಭಾರತದಲ್ಲಿ ಇಲ್ಲಿಯವರೆಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನ ಬಳಕೆ ಮಾಡಲಾಗುತ್ತಿತ್ತು. ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ನಡೆಯುತ್ತಿದ್ದು ಈ ಸಮಯದಲ್ಲೇ ಭಾರತದ ವಿವಿಧ ರಾಜ್ಯಗಳಲ್ಲಿ ಲಸಿಕೆ ಅಭಾವ ಕಾಣಿಸಿಕೊಳ್ತಿದೆ. ಈ ಸಮಸ್ಯೆಯನ್ನ ತಡೆಗಟ್ಟಲಿಕ್ಕೋಸ್ಕರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗ್ತಿದೆ.