ಬೆಂಗಳೂರು: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆ ಪೊಲಿಸರು ಬಂಧಿಸಿದ್ದಾರೆ.
ಬಂಧಿತ ನಕಲಿ ಸೇನಾಧಿಕಾರಿ ಬೆಳಗಾವಿ ಮೂಲದ ಅಂಜನೇಷ್ ಮಠಪತಿ (31) ಎಂದು ಗುರುತಿಸಲಾಗಿದೆ. ಈತ ತಾನು ಸೇನಾಧಿಕಾರಿ ಎಂದು ಹೇಳಿಕೊಂಡು ಯುವತಿಯರಿಗೆ ಮದುವೆಯಾಗುವುದಾಗಿ ಹೇಳಿ ನಂಬಿಸುತ್ತಿದ್ದ. ಇದೇ ವೇಳೆ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಕಾರು ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ್ದ.
ಹಣ ಉಳಿತಾಯದ ಗುಟ್ಟು ಬಿಚ್ಚಿಟ್ಟ ಮಹಿಳೆ….!
ಮಠಪತಿ ಮೂವರು ಯುವತಿಯರನ್ನು ನಂಬಿಸಿ ವಂಚಿಸಿದ್ದನಲ್ಲದೇ ಇಬ್ಬರು ಯುವತಿಯರೊಂದಿಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಈತನ ವಿರುದ್ಧ ಸುಬ್ರಹಣ್ಯಪುರ ಠಾಣೆಯಲ್ಲಿ ನಾಗೇಂದ್ರ ಹಾಗೂ ಸಂಬಂಧಿಕರು 23 ಲಕ್ಷ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದರು.
ಇದೀಗ ನಕಲಿ ಸೇನಾಧಿಕಾರಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ನಕಲಿ ಪಿಸ್ತೂಲ್, ಸೇನೆಯ ಗುರುತಿನ ಚೀಟಿ, ಸಮವಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.