ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿರೋದನ್ನ ಕಂಡ ನೆರೆಮನೆಯವರು ಮನೆಗೆ ತೆರಳಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಚಾಕು ಇರಿತದಿಂದ ಈ ದಂಪತಿ ಮೃತರಾಗಿದ್ದಾರೆ ಎಂದು ಅಮೆರಿಕದ ಕೆಲ ಮಾಧ್ಯಮಗಳು ವರದಿ ಮಾಡಿವೆ. ಬಾಲಾಜಿ ಭರತ್ ರುದ್ರಾವರ್ (32) ಹಾಗೂ ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್ (30) ಮೃತದೇಹ ನ್ಯೂಜೆರ್ಸಿಯ 21 ಗಾರ್ಡನ್ ಟೆರ್ರೆಸ್ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಲಾಜಿ ತಂದೆ ಭರತ್ ರುದ್ರಾವರ್, ನಮ್ಮ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಿರೋದನ್ನ ಕಂಡ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಯ ಒಳಗೆ ಹೋದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ವರದಿಗಾಗಿ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ. ಇನ್ನು ಈ ಸಂಬಂಧ ಸ್ಥಳೀಯ ಪೊಲೀಸರು ಮಾತನಾಡಿದ್ದು, ದಂಪತಿ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ರು.
ನನ್ನ ಸೊಸೆ 7 ತಿಂಗಳ ಗರ್ಭವತಿಯಾಗಿದ್ದಳು. ನಾವು ಕೆಲವೇ ದಿನಗಳಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸುವವರಿದ್ದೆವು. ಅವರದ್ದು ಸುಖಿ ಕುಟುಂಬ. ಅವರ ಮೃತ ದೇಹ ಭಾರತ ತಲುಪಲು 8-10 ದಿನವಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ನಮ್ಮ ಮೊಮ್ಮಗಳು ನನ್ನ ಪುತ್ರನ ಸ್ನೇಹಿತರ ಮನೆಯಲ್ಲಿ ಇದ್ದಾಳೆ. ನ್ಯೂಜೆರ್ಸಿಯಲ್ಲಿ 60 ಪ್ರತಿಶತ ಭಾರತೀಯರೇ ಇದ್ದಾರೆ ಎಂದು ಭರತ್ ಹೇಳಿದ್ದಾರೆ.