ಬೆಂಗಳೂರು: ಕೊರೊನಾ ನಿಯಂತ್ರಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಕಠಿಣ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕೊರೊನಾ ಎರಡನೇ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಿಯಮ ಬದಲಿಸುವಂತೆ ಚಿತ್ರರಂಗದವರು, ಜಿಮ್ ಮಾಲೀಕರು ಸೇರಿದಂತೆ ಹಲವರು ಮನವಿ ಮಾಡುತ್ತಿದ್ದಾರೆ. ಆದರೆ ಕೋವಿಡ್ ನಿಯಂತ್ರಣ ಆಗದ ಹೊರತು ಮಾರ್ಗಸೂಚಿಯಲ್ಲಿ ಬದಲಾವಣೆ ಅಸಾಧ್ಯ. ನಾವು ಉದ್ದೇಶಪೂವಕವಾಗಿಯೋ ಅಥವಾ ಏಕಾಏಕಿಯಾಗಿಯೋ ನಿಯಮ ಜಾರಿ ಮಾಡಿಲ್ಲ. ತಾಂತ್ರಿಕ ಸಲಹಾ ಸಮಿತಿ ವರದಿ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದೇವೆ. ಏಪ್ರಿಲ್ 20ರವರೆಗೂ ಈಗಿನ ನಿಯಮ ಅನ್ವಯವಾಗುತ್ತದೆ ಎಂದರು.
ಐಪಿಎಲ್ ಗೆ ಕೊರೊನಾ ಕರಿನೆರಳು….! ವಾಂಖೆಡೆ ಸ್ಟೇಡಿಯಂನ 8 ಸಿಬ್ಬಂದಿಗೆ ಕೊರೊನಾ
ಇನ್ನು ಥಿಯೇಟರ್ ಗಳಿಗೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ವಿಚಾರವಾಗಿ ನಟ ಪುನೀತ್ ರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಸಚಿವರು, ನಮಗೆ ಎಲ್ಲರ ಬಗ್ಗೆ ಗೌರವ, ಅಭಿಮಾನವಿದೆ. ಸಿನಿಮಾ ಕ್ಷೇತ್ರಕ್ಕೆ ಮಾತ್ರ ನಾವು ನಿಯಮ ಜಾರಿ ಮಾಡಿಲ್ಲ. ಚುನಾವಣೆಗಳಿಗೂ, ರಾಜಕೀಯ ರ್ಯಾಲಿ, ಸಭೆ ಸಮಾರಂಭಗಳಿಗೂ ನಿಯಮ ಅನ್ವಯವಾಗುತ್ತದೆ. ಧಾರ್ಮಿಕ ಚಟುವಟಿಕೆಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ತಡೆಗೆ ಕ್ರಮ ಕೈಗೊಳ್ಳಬೇಕಿರುವುದು ಅನಿವಾರ್ಯವಾಗಿದೆ ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದರು.