2021ನೇ ಸಾಲಿನ ಜೆಇಇ ಪರೀಕ್ಷೆಯಲ್ಲಿ ದೆಹಲಿ ಕಾವ್ಯಾ ಚೋಪ್ರಾ 100 ಪ್ರತಿಶತ ಫಲಿತಾಂಶವನ್ನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 300 ಕ್ಕೆ 300 ಅಂಕಗಳನ್ನ ಪಡೆದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೆಬ್ರವರಿಯಲ್ಲಿ ಕಾವ್ಯಾ ಚೋಪ್ರಾ 99.9 ಪ್ರತಿಶತವನ್ನ ದಾಖಲಿಸಿದ್ದರು. ಈ ಫಲಿತಾಂಶದ ಮೂಲಕವೇ ಕಾವ್ಯಾ ಮುಂದಿನ ವ್ಯಾಸಂಗವನ್ನ ಮಾಡಬಹುದಾಗಿತ್ತಾದರೂ ತನ್ನ ಫಲಿತಾಂಶವನ್ನ ಸುಧಾರಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ರು. ಇದೀಗ ಮಾರ್ಚ್ನಲ್ಲಿ ಮತ್ತೊಂದು ಪರೀಕ್ಷೆ ಬರೆದ ಕಾವ್ಯಾ 300ಕ್ಕೆ 300 ಅಂಕ ಪಡೆದಿದ್ದಾರೆ. ಟಾಪ್ ರ್ಯಾಂಕರ್ ಕಾವ್ಯಾ ಚೋಪ್ರಾ ಐಐಟಿ ದೆಹಲಿ ಇಲ್ಲವೇ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುವ ಆಸೆ ಹೊಂದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕಾವ್ಯ ಚೋಪ್ರಾ, ಗಣಿತ ಎಂದಿಗೂ ನನ್ನ ಪ್ರೀತಿಯ ವಿಷಯವಾಗಿದೆ. ಕಂಪ್ಯೂಟರ್ ಸೈನ್ಸ್ ಕೂಡ ಗಣಿತದ ಮೇಲೆಯೇ ನಿಂತಿದೆ ಅಲ್ಲದೇ ಆರ್ಥಿಕವಾಗಿ ಸ್ಥಿರವಾದ ವೃತ್ತಿ ಜೀವನವಾಗಿದೆ. ನನ್ನ ತಂದೆ ತಾಯಿ ಎಂದಿಗೂ ನನ್ನ ಹಾಗೂ ಸಹೋದರನ ನಡುವೆ ಬೇಧ ಭಾವ ಮಾಡಿಲ್ಲ. ಭಾರತದಲ್ಲಿ ಇಂತಹ ಮನಸ್ಥಿತಿಯ ಪೋಷಕರು ಸಿಗೋದು ಅಂದರೆ ಅದು ಪುಣ್ಯವೇ ಸರಿ ಎಂದು ಹೇಳಿದ್ರು.
ಕಾವ್ಯಾ ಚೋಪ್ರಾ ತಂದೆ ದೆಹಲಿ ಮೂಲದ ಇಂಜಿನಿಯರ್ ಆಗಿದ್ದಾರೆ. ಕಾವ್ಯಾ ದಿನಕ್ಕೆ 7-8 ಗಂಟೆ ವ್ಯಾಸಂಗ ಮಾಡುತ್ತಿದ್ದರಂತೆ. ಮಾರ್ಚ್ನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ನಿರ್ಧರಿಸಿದ ಕಾವ್ಯಾ ಕೆಮಿಸ್ಟ್ರಿ ವಿಷಯದ ಮೇಲೆ ಹೆಚ್ಚು ಫೋಕಸ್ ಮಾಡಿದ್ದರಂತೆ.