ಕೊರೊನಾ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಹೋಗಿತ್ತು. ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಮಾಡುವಂತೆ ಆದೇಶವನ್ನ ನೀಡಿದ್ದವು. ಇದೀಗ ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ತ್ವರಿತಗತಿಯಲ್ಲಿ ಸಾಗುತ್ತಿದೆ. ಸಹಜವಾಗಿ ಕೊರೊನಾ ಜೊತೆಯೇ ಬದುಕೋಕೆ ಜನರು ರೂಢಿ ಮಾಡಿಕೊಂಡಿದ್ದಾರೆ. ಹೀಗಾಗಿ ಮೈಕ್ರೋಸಾಫ್ಟ್ ಕೂಡ ಮೊದಲಿನಂತೆಯೇ ಕೆಲಸ ಮಾಡಲು ನಿರ್ಧರಿಸಿದೆ.
ಮೈಕ್ರೋಸಾಫ್ಟ್ ಕಂಪನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಕರ್ಟ್ ಡೆಲ್ಬೀನ್, ಕಂಪನಿಯ ಸಿಬ್ಬಂದಿಗೆ ವಾಪಸ್ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ವಾಷಿಂಗ್ಟನ್ ಮತ್ತು ಹತ್ತಿರದ ಕ್ಯಾಂಪಸ್ಗಳಲ್ಲಿರುವ ತನ್ನ ಪ್ರಧಾನ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ವಾಪಸ್ ಕಚೇರಿಗೆ ಹಾಜರಾಗುವಂತೆ ಹೇಳಲಾಗಿದೆ. ಸ್ಥಳೀಯ ಆರೋಗ್ಯ ಇಲಾಖೆಯಿಂದ ಮಾಹಿತಿಯನ್ನ ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿರೋದಾಗಿ ಕರ್ಟ್ ಡೆಲ್ಬೀನ್ ಹೇಳಿದ್ದಾರೆ.
ಅಲ್ಲದೇ ಕಚೇರಿಗೆ ಹಾಜರಾಗುವ ಸಿಬ್ಬಂದಿಯ ಆರೋಗ್ಯದ ಕಡೆಯೂ ಗಮನ ಇರಿಸಿರುವ ಮೈಕ್ರೋಸಾಫ್ಟ್ ಕಂಪನಿ, ಉದ್ಯೋಗಿಗಳ ನಡುವೆ ಸಾಮಾಜಿಕ ಅಂತರ ಕಾಪಾಡುವ ವ್ಯವಸ್ಥೆ ಮಾಡೋದ್ರ ಜೊತೆಗೆ ಫೇಸ್ ಮಾಸ್ಕ್ಗಳನ್ನ ಹಾಗೂ ಆರೋಗ್ಯ ಸಂಬಂಧಿ ಎಲ್ಲಾ ಮುನ್ನಚ್ಚರಿಕೆಗಳನ್ನ ಕೈಗೊಳ್ಳುವ ಭರವಸೆ ನೀಡಿದೆ. ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಮಾರ್ಚ್ 29ರಿಂದ ಸಿಬ್ಬಂದಿಗೆ ಕಚೇರಿಗೆ ವಾಪಸ್ಸಾಗುವಂತೆ ಹೇಳಲಾಗಿದೆ. ಪ್ರಸ್ತುತ ಮೈಕ್ರೋಸಾಫ್ಟ್ ಕಂಪನಿ 21 ದೇಶಗಳಲ್ಲಿ ತನ್ನ ಕಂಪನಿಯನ್ನ ಹೊಂದಿದ್ದು ಒಟ್ಟು 1.6 ಲಕ್ಷ ಸಿಬ್ಬಂದಿಗೆ ಕೆಲಸ ನೀಡಿದೆ.