ಮಕ್ಕಳಿಗೆ ದೊಡ್ಡವರಾದ ಮೇಲೆ ಶಿಕ್ಷಕನಾಗಬೇಕು, ವೈದ್ಯನಾಗಬೇಕು, ಪೊಲೀಸ್ ಆಗಬೇಕು ಹೀಗೆ ನಾನಾ ಬಗೆಯ ಆಸೆಗಳು ಇರುತ್ವೆ. ಆದರೆ ಎಲ್ಲರಿಗೂ ಈ ಕನಸನ್ನ ನನಸು ಮಾಡಿಕೊಳ್ಳೋಕೆ ಸಾಧ್ಯವಾಗಲ್ಲ. ಕೆಲವೊಮ್ಮೆ ಜೀವನ ಎಷ್ಟು ಕ್ರೂರವಾಗಿಬಿಡುತ್ತೆ ಅಂದರೆ ದೊಡ್ಡ ದೊಡ್ಡ ಕನಸುಗಳನ್ನ ನನಸು ಮಾಡಿಕೊಳ್ಳೋಕೆ ಅವಕಾಶ ನೀಡೋದೇ ಇಲ್ಲ.
ಫ್ಲೋರಿಡಾದ ಮಿಯಾಮಿ ನಗರದ ಬಾಲಕ ಜೆರೆಮಿಯಾ ಎಂಬವನ ಬಾಳಲ್ಲೂ ಇದೇ ರೀತಿಯ ದುರ್ಘಟನೆ ಸಂಭವಿಸಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಈ ಬಾಲಕ ಇನ್ನೇನು ಕೆಲವೇ ದಿನಗಳಲ್ಲಿ 5ನೇ ವರ್ಷದ ಜನ್ಮದಿನಾಚರಣೆ ಮಾಡಿಕೊಳ್ಳಲಿದ್ದಾನೆ.
ಈ ಬಾಲಕನ ಜನ್ಮದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ವಿಶೇಷ ಉಡುಗೊರೆ ನೀಡೋಕೆ ಪ್ಲಾನ್ ಮಾಡಿದ್ದಾರೆ. ಈತ ದೊಡ್ಡವನಾದ ಮೇಲೆ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಕನಸನ್ನ ಹೊಂದಿದ್ದ. ಹೀಗಾಗಿ ಮಿಯಾಮಿ ಪೊಲೀಸರು ಈ ಬಾಲಕನ ಆಸೆಯನ್ನ ಈಡೇರಿಸಿದ್ದಾರೆ. ನೌಕಾ ನೀಲಿ ಬಣ್ಣದ ಸಮವಸ್ತ್ರವನ್ನ ಧರಿಸಿದ ಬಾಲಕ ಇದೀಗ ಪೊಲೀಸ್ ಅಧಿಕಾರಿಯಾಗಿದ್ದಾನೆ.
ಪೊಲೀಸ್ ಇಲಾಖೆ ಮುಖ್ಯಸ್ಥ ಲ್ಯಾರಿ ಜುರಿಗಾ ಪ್ರಮಾಣ ವಚನ ಬೋಧಿಸಿದ್ರು. ಈ ಮೂಲಕ ಜೆರೆಮಿಯಾ ಕನಸನ್ನ ಒಂದು ದಿನದ ಮಟ್ಟಿಗೆ ನನಸು ಮಾಡಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಜೆರೆಮಿಯಾ ತನ್ನ ಸಹೋದ್ಯೋಗಿಗಳೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳು ಈ ಫೋಟೋವನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು ಪೋಸ್ಟ್ ಸಖತ್ ವೈರಲ್ ಆಗಿದೆ.