ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೆ ಮೂರು ಬಾರಿ ಎಡವಿ ಬಿದ್ದ ಘಟನೆ ನಡೆದಿದೆ. ಇದು ಅಧ್ಯಕ್ಷರ ಆರೋಗ್ಯದ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.
ಏಷಿಯನ್-ಅಮೆರಿಕನ್ ಸಮುದಾಯಗಳ ಮುಖಂಡರೊಂದಿಗೆ ಚರ್ಚಿಸಲು ಬೈಡನ್ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ವಿಮಾನದ ಮೆಟ್ಟಿಲುಗಳನ್ನು ಹತ್ತುವಾಗ ಮೊದಲು ಸ್ವಲ್ಪ ಪ್ರಮಾಣದಲ್ಲಿ ಬೈಡನ್ ಎಡವಿದ್ದಾರೆ. ಅದಾಗಿ ಕೆಲ ಸೆಕೆಂಡುಗಳಲ್ಲೇ ಮತ್ತೆ ಎಡವಿದ್ದಾರೆ. ಮುಂದುವರೆದು ಮೆಟ್ಟಿಲು ಹತ್ತುವಾಗ ಮೂರನೇ ಬಾರಿ ಎಡವಿ ಬಿದ್ದಿದ್ದು, ಆದರೂ ಸಾವರಿಸಿಕೊಂಡು ಎದ್ದು ನಿಂತಿದ್ದಾರೆ.
78 ವರ್ಷದ ಅಮೆರಿಕ ಅಧ್ಯಕ್ಷ ಬೈಡನ್ ಹೀಗೆ ಪದೇ ಪದೇ ಎಡವಿದ್ದನ್ನು ಕಂಡು ಅವರ ಆರೋಗ್ಯದ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಧ್ಯಮ ಉಪ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಬೈಡನ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ವಿಮಾನ ಮೆಟ್ಟಿಲು ಹತ್ತುವಾಗ ತುಂಬಾ ಗಾಳಿ ಬೀಸುತ್ತಿತ್ತು. ಹಾಗಾಗಿ ಅವರಿಗೆ ಸಮತೋಲನ ತಪ್ಪಿದೆ ಅಷ್ಟೇ ಎಂದು ತಿಳಿಸಿದ್ದಾರೆ.