ಬಾಂಬೆ ಹೈಕೋರ್ಟ್ ಬುಧವಾರ ಕೌಟುಂಬಿಕ ನ್ಯಾಯಾಲಯದ ಆದೇಶವನ್ನ ಬದಿಗಿಟ್ಟು, 2003ರಲ್ಲಿ ತಾಯಿಯ ಮರಣದ ಬಳಿಕ ತಂದೆಯ ಎರಡನೇ ಮದುವೆಯ ಸಿಂಧುತ್ವವನ್ನ ಪ್ರಶ್ನಿಸಿದ ಕೈಗಾರಿಕೋದ್ಯಮಿಯೊಬ್ಬರ ಪುತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ತೀರ್ಮಾನಿಸಿದೆ.
ಎರಡನೆ ಪತ್ನಿ ಈ ಹಿಂದೆ ಬೇರೆ ಮದುವೆಯಾಗಿದ್ದು ವಿಚ್ಛೇದನವನ್ನೂ ಪಡೆದಿಲ್ಲ ಎಂದು ಕೈಗಾರಿಕೋದ್ಯಮಿಯ ಪುತ್ರಿ ಆರೋಪಿಸಿದ್ದರು. ಆದರೆ ಮಹಿಳೆ ಈ ಆರೋಪವನ್ನ ತಳ್ಳಿ ಹಾಕಿದ್ದು ತಾನು 1984ರಲ್ಲೇ ತಲಾಕ್ ರೂಪದಲ್ಲಿ ವಿಚ್ಚೇದನ ಪಡೆದಿದ್ದು ಈ ಮದುವೆ ಮಾನ್ಯವಾಗಿದೆ ಎಂದು ಹೇಳಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ್ದ ಆರ್ ಡಿ ಧನುಕಾ ಹಾಗೂ ವಿಜಿ ಭಿಶ್ತ್ ನೇತೃತ್ವದ ಕುಟುಂಬ ನ್ಯಾಯಾಲಯದ ನ್ಯಾಯಪೀಠ ಪುತ್ರಿಗೆ ತನ್ನ ತಂದೆಯ ಮದುವೆಯ ಸಿಂಧುತ್ವವನ್ನ ಪ್ರಶ್ನಿಸುವ ಅಧಿಕಾರವಿಲ್ಲ ಎಂದು ಹೇಳಿತ್ತು.
ಆದರೆ ಕುಟುಂಬ ನ್ಯಾಯಾಲಯದ ಈ ತೀರ್ಪನ್ನ ಪ್ರಶ್ನಿಸಿ 66 ವರ್ಷದ ಪುತ್ರಿ 2019ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಎರಡನೆ ಪತ್ನಿ ಪರ ವಕೀಲರು ತಂದೆಯ ವಿವಾಹದ ಸಿಂಧುತ್ವವನ್ನ ಪ್ರಶ್ನಿಸುವ ಅಧಿಕಾರ ಪುತ್ರಿಗೆ ಇರಲ್ಲ ಎಂದು ಕೋರ್ಟ್ ಮುಂದೆ ಬಲವಾಗಿ ವಾದಿಸಿದ್ದರು.
ಆದರೆ ಕುಟುಂಬ ನ್ಯಾಯಾಲಯದ ತೀರ್ಪನ್ನ ಮರುಪರಿಶೀಲಿಸಿದ ಮುಂಬೈ ಹೈಕೋರ್ಟ್ ‘ಪುತ್ರಿ ತನ್ನ ತಂದೆಯ ಎರಡನೇ ವಿವಾಹದ ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಹೊಂದಿದ್ದಾಳೆ’ ಎಂದು ಹೇಳಿದೆ. ಅಲ್ಲದೇ ಈಕೆಯ ಅರ್ಜಿಯನ್ನ 6 ತಿಂಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.