ನವದೆಹಲಿ: ಆಧಾರ್ ಕಾರ್ಡ್ ನೊಂದಿಗೆ ಜೋಡಣೆಯಾಗದ ಕಾರಣಕ್ಕೆ ದೇಶಾದ್ಯಂತ 4 ಕೋಟಿಗೂ ಅಧಿಕ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಪಡಿತರ ಚೀಟಿ ರದ್ದಾಗಿದ್ದ ಕಾರಣ ಆಹಾರ ಸಿಗದೇ ಹಸಿವಿನಿಂದ ಜಾರ್ಖಂಡ್ ನ 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಪ್ರಕರಣ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ. ಮೃತ ಬಾಲಕಿಯ ತಾಯಿ ಕೊಯ್ಲಿದೇವಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠದಲ್ಲಿ ನಡೆದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
2017 ರಿಂದಲೂ ಈ ಪ್ರಕರಣ ಬಾಕಿ ಇದ್ದು ಅತ್ಯಂತ ಗಂಭೀರವಾಗಿದೆ. ನಾಲ್ಕು ವಾರಗಳ ಒಳಗೆ ನೋಟಿಸ್ ಗೆ ಉತ್ತರ ನೀಡಬೇಕು. ಈ ಮೇಲ್ಮನವಿಯನ್ನು ವ್ಯತಿರಿಕ್ತವಾಗಿ ಪರಿಗಣಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಆಧಾರ್ ಜೋಡಣೆ ಆಗಿಲ್ಲವೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅಂದಾಜು 3 ಕೋಟಿಯಷ್ಟು ಹಾಗೂ ರಾಜ್ಯ ಸರ್ಕಾರಗಳು ತಲಾ 10 ರಿಂದ 15 ಲಕ್ಷದಷ್ಟು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ಎಂದು ಅರ್ಜಿದಾರರ ಪರ ವಕೀಲ ಕಾಲಿನ್ ಗೊನ್ಸಾಲ್ವೀಸ್ ಹೇಳಿದ್ದಾರೆ.
ಬುಡಕಟ್ಟು ಜನರು ವಾಸಿಸುವ ಪ್ರದೇಶದಲ್ಲಿ ಬಯೋಮೆಟ್ರಿಕ್ ಗುರುತಿಸುವ ಸ್ಕ್ಯಾನರ್ ಗಳು ಕಾರ್ಯನಿರ್ವಹಿಸದ ಉದಾಹರಣೆಗಳಿವೆ. ಈ ಕಾರಣಕ್ಕೆ ಸುಮಾರು 4 ಕೋಟಿ ಪಡಿತರ ಚೀಟಿ ರದ್ದು ಮಾಡಿರುವುದಾಗಿ ಕೇಂದ್ರವೇ ಹೇಳಿಕೊಂಡಿದೆ ಎಂದು ತಿಳಿಸಲಾಗಿದೆ.
ಪಡಿತರ ಚೀಟಿಗಳು ನಕಲಿಯೆಂದು ಕೇಂದ್ರ ಸರ್ಕಾರ ವಿವರಣೆ ನೀಡಿದೆ. ಆಧಾರ್ ಕಾರ್ಡ್ ದೊರೆಯದಿರುವುದು, ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು, ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸರಿಯಾಗಿಗಿಲ್ಲದಿರುವುದನ್ನು ಸರ್ಕಾರ ಪರಿಗಣಿಸಿಲ್ಲ ಎಂದು ದೂರಲಾಗಿದೆ.
ಪಡಿತರ ಚೀಟಿಗೆ ಆಧಾರ್ ಜೋಡಣೆ ಆಗದಿದ್ದರೆ ಬೇರೆ ದಾಖಲೆ ಸಲ್ಲಿಸಬಹುದು. ಆಧಾರ್ ಇಲ್ಲದಿದ್ದರೂ ಆಹಾರ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇವೆಲ್ಲ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.