ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಇತಿಹಾಸದಲ್ಲೇ ಇಂತಹ ಕೆಟ್ಟ ಬಜೆಟ್ ನ್ನು ನೋಡಿರಲಿಲ್ಲ. ಬಜೆಟ್ ನಲ್ಲಿ ರೆವೆನ್ಯೂ, ಖರ್ಚು-ವೆಚ್ಚ ಸಮತೋಲನವಿರಬೇಕು ಆದರೆ ಈ ಬಾರಿ ಬಜೆಟ್ ವೆಚ್ಚವೇ ಅಧಿಕವಾಗಿದೆ ಎಂದು ಕಿಡಿಕಾರಿದರು.
ಈ ರೀತಿ ಬಜೆಟ್ ನಿಂದ ಸರ್ಕಾರದ ಮೇಲೂ ಪರಿಣಾಮ ಬೀರುತ್ತೆ. ನಾವು ತೆಗೆದುಕೊಳ್ಳುವ ಸಾಲ ಆದಾಯದ ಶೇ.25ರ ಒಳಗಿರಬೇಕು. 2004-05ರಲ್ಲಿ ನಾವು ಸಮತೋಲನ ಕಾಯ್ದುಕೊಂಡೆವು. ಆಗ ನಾನು ಹಣಕಾಸು ಮಂತ್ರಿಯಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಅದನ್ನು ಮೇಂಟೆನ್ ಮಾಡಿದೆವು. ಆದರೆ ಈ ಬಾರಿ ಎಲ್ಲಾ ಏರುಪೇರಾಗಿದ್ದು, ಬಜೆಟ್ ಗಾಗಿ 75 ಸಾವಿರ ಕೋಟಿ ರೂ. ಸಾಲ ತೆಗೆದುಕೊಳ್ಳಲಾಗಿದೆ. ಇಂತಹ ಬಜೆಟ್ ನ್ನು ನಾನು ಈವರೆಗೆ ನೋಡಿರಲಿಲ್ಲ ಎಂದು ಗುಡುಗಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ನೀವು ನನ್ನ ಸ್ಥಾನದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ನಿಮ್ಮ ಸ್ಥಾನವನ್ನು ನೀವು ಬಿಟ್ಟುಬಿಡಿ. ಆಗ ನಾನು ಅಲ್ಲಿದ್ದು ಹೇಳ್ತೀನಿ. ನಿಮ್ಮ ಖುರ್ಚಿಯಲ್ಲಿ ಕೂರುವ ದಿನ ದೂರವಿಲ್ಲ. ಮುಂದಿನ ಬಾರಿ ಜನ ಮತ್ತೆ ಅವಕಾಶ ನೀಡುತ್ತಾರೆ. ಆ ದಿನ ಶೀಘ್ರವೇ ಬರಲಿದೆ ದೂರವಿಲ್ಲ ಎಂದು ಕಾಲೆಳೆದರು.