ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಗೆ ಅನುದಾನ ನೀಡಿಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು ಬಿಜೆಪಿ ಸರ್ಕಾರ 5 ಕೆಜಿಗೆ ಇಳಿಕೆ ಮಾಡಿದೆ. ಆದರೆ, ಸಿಎಂ ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಪಡಿತರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿಲ್ಲ.
‘ಅನ್ನಭಾಗ್ಯ’ ಮತ್ತು ‘ಕ್ಷೀರ ಭಾಗ್ಯ’ ಯೋಜನೆಗೆ ವಿಶೇಷ ಕೊಡುಗೆ ನೀಡಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಗೂ ಅನುದಾನ ನೀಡಿಲ್ಲ.
ಅಂದ ಹಾಗೆ, ಬಡವರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳು ಸೇರಿದಂತೆ ಕೂಲಿ ಕಾರ್ಮಿಕರು, ಕಾರ್ಮಿಕರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಲಾಗಿದೆ. ಆದರೆ, ಇವುಗಳಿಗೆ ಅನುದಾನ ನೀಡಿಲ್ಲ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಭಾರಿ ಮೊತ್ತದ ಹಣ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.