ಬೆಂಗಳೂರು: ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿನ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕಾರ್ಯಾಭಾರಕ್ಕೆ ಅನುಗುಣವಾಗಿ ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ 2020 – 21 ನೇ ಸಾಲಿನ ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಬಂದಿರುವ ಪ್ರಸ್ತಾವನೆಗಳ ಆಧಾರದಲ್ಲಿ ಅನುಮೋದನೆ ನೀಡಲಾಗಿದ್ದು, ನಿಬಂಧನೆಗಳಿಗೆ ಒಳಪಟ್ಟು ಪ್ರಾಂಶುಪಾಲರ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ತಿಳಿಸಲಾಗಿದೆ.
ಭದ್ರಾವತಿ ಸರ್ಕಾರಿ ತಾಂತ್ರಿಕ ಶಾಲೆಯಲ್ಲಿ 10, ಮಂಗಳೂರಿನಲ್ಲಿ 7, ಬಾಗಲಕೋಟೆಯ 10, ಹುಬ್ಬಳ್ಳಿಯಲ್ಲಿ 5, ಕಲಬುರ್ಗಿಯಲ್ಲಿ 2, ಬಳ್ಳಾರಿಯಲ್ಲಿ 4 ಸೇರಿದಂತೆ 38 ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.