ಬೆಂಗಳೂರು: ಕನ್ನಡದ ಖ್ಯಾತ ಕವಿ ಸಾಹಿತಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಎನ್.ಎಸ್.ಎಲ್. ಎಂದೇ ಸಾಹಿತ್ಯಲೋಕದಲ್ಲಿ ಪರಿಚಿತರಾಗಿದ್ದ ಲಕ್ಷ್ಮೀನಾರಾಯಣಭಟ್ಟರು ಇಂದು ಬೆಳಗಿನ ಜಾವ ಬನಶಂಕರಿಯ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.
ಭಾವಗೀತೆ, ಸಾಹಿತ್ಯ ವಿಮರ್ಶೆ, ನವ್ಯಕವಿತೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ ಎನ್.ಎಸ್.ಎಲ್. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು 1936 ರ ಅಕ್ಟೋಬರ್ 29 ರಂದು ಶಿವಮೊಗ್ಗದಲ್ಲಿ ಜನಿಸಿದ್ದರು. ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ…, ಎಲ್ಲಿ ಜಾರಿತೋ ಮನವು… ಎಲ್ಲಿ ನೂಕಿತೋ, ಎಲ್ಲ ನಿನ್ನ ಲೀಲೆ ತಾಯೆ.., ನನ್ನ ಇನಿಯನ ನೆಲೆಯ… ಮೊದಲಾದ ಗೀತೆ ರಚಿಸಿದ್ದಾರೆ.