ನೀವು 90ರ ದಶಕದಲ್ಲಿ ಕಾರ್ಟೂನ್ ನೆಟ್ವರ್ಕ್ ನೋಡಿ ಬೆಳೆದ ಮಕ್ಕಳಾಗಿದ್ರೆ ನಿಮಗೆ ಪಾಪ್ ಐ ಎಂಬ ಕಾಮಿಕ್ ಪಾತ್ರದ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ. ಪಾಪ್ ಐ ಬೈಸೆಪ್ಸ್ಗಳಂತೂ ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತಿತ್ತು.
ಕಿರಿಲ್ ಟೆರೆಶಿನ್ ಎಂಬ ಹೆಸರಿನ ವ್ಯಕ್ತಿ ಕೂಡ ಚಿಕ್ಕ ವಯಸ್ಸಲ್ಲಿ ಇಂತದ್ದೇ ಕಾರ್ಟೂನ್ಗಳನ್ನ ನೋಡಿ ಬಾಲ್ಯವನ್ನ ಕಳೆದಿದ್ದರಿಂದ ತಾನೂ ಬೈಸೆಪ್ಸ್ ಹೊಂದಬೇಕು ಎಂದು ಮಹದಾಸೆ ಹೊಂದಿದ್ದ ಎನ್ನಲಾಗಿದೆ.
ಇದಕ್ಕಾಗಿ ಆತನ ಜಿಮ್ಗೆ ಹೋಗಲಿಲ್ಲ ಅಥವಾ ವ್ಯಾಯಾಮವನ್ನೂ ಮಾಡಲಿಲ್ಲ. ಬದಲಾಗಿ ತನ್ನ ತೋಳುಗಳಲ್ಲಿ ಬರೋಬ್ಬರಿ ಮೂರು ಲೀಟರ್ ಪೆಟ್ರೋಲಿಯಂ ಜೆಲ್ಲಿಯನ್ನು ಇಂಜೆಕ್ಟ್ ಮಾಡಿಕೊಂಡಿದ್ದ. ಈತನ ದೊಡ್ಡ ತೋಳನ್ನ ನೋಡಿದ ಬಳಿಕ ಎಲ್ಲರೂ ಈತನಿಗೆ ಸ್ಥಳೀಯ ಸೆಲೆಬ್ರಿಟಿ ಸ್ಥಾನ ನೀಡಿದ್ರು.
ಆದರೆ ಕಿರಿಲ್ರ ಈ ಪ್ಲಾನ್ ಬಹಳ ವರ್ಷ ನಡೆಯಲಿಲ್ಲ. ತೋಳಲ್ಲಿದ್ದ ಪೆಟ್ರೋಲಿಯಂ ಜೆಲ್ಲಿಯಿಂದ ಕೈನ ಆರೋಗ್ಯ ಹದಗೆಡುತ್ತಾ ಬಂದಿದೆ. ಇದರಿಂದಾಗಿ ಕಿರಿಲ್ ಅನಿವಾರ್ಯವಾಗಿ ಸರ್ಜರಿಗೆ ಒಳಗಾಗಬೇಕಾಗಿ ಬಂತು. ಪೆಟ್ರೋಲಿಯಂ ಜೆಲ್ಲಿ ಗಟ್ಟಿಯಾದ ಬಳಿಕ ಉಂಡೆಯಾಗಿ ಮಾರ್ಪಾಡಾಗಿದ್ದು ಇದನ್ನ ತೆಗೆಯೋಕೆ ಸಾಕಷ್ಟು ಸರ್ಜರಿ ಮಾಡಬೇಕಾಗಿ ಬಂದಿದೆ.
ಕೊರೊನಾ ಕಾರಣದಿಂದಾಗಿ ಈ ಸರ್ಜರಿ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ವೈದ್ಯರು ಸರ್ಜರಿ ಯಶಸ್ವಿಗೊಳಿಸಿದ್ದು ಪೆಟ್ರೋಲಿಯಂ ಜೆಲ್ಲಿಯನ್ನ ತೆಗೆದು ಹಾಕಿದ್ದಾರೆ. 24 ವರ್ಷದ ಕಿರಿಲ್ ಈಗ ಆರೋಗ್ಯವಾಗಿದ್ದಾರೆ. 20 ವರ್ಷ ವಯಸ್ಸಿನವನಾಗಿದ್ದಾಗ ಕಿರಿಲ್ ತಮ್ಮ ಕೈಗೆ ತಾವೇ ಪೆಟ್ರೋಲಿಯಂ ಜೆಲ್ಲಿ ಇಂಜೆಕ್ಟ್ ಮಾಡಿಕೊಂಡಿದ್ರು.