ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟ ಸರ್ಕಾರದ ಸಚಿವರು ಹಾಗೂ ಶಾಸಕರ ರಾಜಿನಾಮೆಯಿಂದ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಪ್ರಸ್ತುತ ಬಹಿರಂಗವಾಗಿದೆ ಎನ್ನಲಾದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳೆ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ.
ಈ ಮೊದಲೇ ಆಡಳಿತರೂಢ ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪನವರ ಸಿಡಿ ಕುರಿತು ಮಾತನಾಡಿದ್ದು, ಅವರ ಸಿಡಿಯನ್ನಿಟ್ಟುಕೊಂಡೇ ಕೆಲವರು ಬ್ಲಾಕ್ ಮೇಲ್ ಮಾಡುವ ಮೂಲಕ ತಮ್ಮ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಬಾಂಬ್ ಸಿಡಿಸಿದ್ದರು. ಜೊತೆಗೆ ನೋಡಬಾರದ ಸಿಡಿ ಸದ್ಯದಲ್ಲೇ ಬಹಿರಂಗವಾಗುತ್ತದೆ ಎಂಬ ಮಾತುಗಳನ್ನಾಡಿದ್ದರು.
ರಾಸಲೀಲೆ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ರಮೇಶ್ ಜಾರಕಿಹೊಳಿ –ಗೋಕಾಕ್ ನಲ್ಲಿ ವಿದ್ಯುತ್ ಕಡಿತ
ಇದೀಗ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಬಹಿರಂಗವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ರಮೇಶ್ ಜಾರಕಿಹೊಳಿ ಯುವತಿಯನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೀಗಾಗಿಯೇ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವರು ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದು, ಒಂದೊಮ್ಮೆ ರಮೇಶ್ ಜಾರಕಿಹೊಳಿ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರಕ್ಕೆ ಕಂಟಕ ಕಾದಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ.