ಏನನ್ನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ ನಮ್ಮಲ್ಲಿರುವ ಯಾವ ನ್ಯೂನ್ಯತೆಯೂ ಅಡ್ಡಿ ಎಂದು ಎನಿಸಲಾರದು ಎಂಬ ಮಾತಿಗೆ ನೈಜ ಉದಾಹರಣೆಯಾಗಿ ನಿಂತಿದ್ದಾರೆ ಬೆಂಗಳೂರಿನ ನಿವಾಸಿ ಅರ್ಚನಾ ತಿಮ್ಮರಾಜು.
ಈಕೆ ಭಾರತದ ಮೊದಲ ಮಹಿಳಾ ಶ್ರವಣದೋಷಿ ಬೈಕ್ ರೈಡರ್ ಆಗಿದ್ದಾರೆ. ಈಕೆ 2006ರಿಂದ ಬೈಕ್ ರೈಡಿಂಗ್ನ್ನು ಹವ್ಯಾಸ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆಯ ಶಿಕ್ಷಕಿಯಾಗಿರುವ 36 ವರ್ಷದ ಅರ್ಚನಾ ಹುಟ್ಟು ಕಿವುಡರು. ಈಕೆಗೆ ಕೇವಲ 40 ಪ್ರತಿಶತ ಮಾತ್ರ ಕೇಳಿಸಿಕೊಳ್ಳುವ ಸಾಮರ್ಥ್ಯವಿದೆ.
ನಾನು ಶಾಲೆಯಲ್ಲಿ ಇದ್ದಾಗ ಮಕ್ಕಳು ನನ್ನನ್ನ ಗೇಲಿ ಮಾಡಿಕೊಳ್ತಿದ್ದರು. ಆದರೆ ಇದರಿಂದ ನಾನೆಂದಿಗೂ ಕಳೆಗುಂದಿಲ್ಲ. ಕಳೆದ 4 ವರ್ಷಗಳಿಂದ ಸ್ಪೀಚ್ ಥೆರಪಿ ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ಹುಟ್ಟಿಕೊಳ್ಳೋಕೆ ಕಾರಣವಾಗಿದೆ ಎಂದು ಹೇಳ್ತಾರೆ ಅರ್ಚನಾ.
ಅರ್ಚನಾ ಇದೀಗ 650 ದಿನಗಳ ಮೋಟಾರ್ ಸೈಕಲ್ ವಿಶ್ವ ಪ್ರವಾಸಕ್ಕೆ ಅಣಿಯಾಗಿದ್ದಾರೆ. ಈ ಸವಾರಿಯಲ್ಲಿ ಅರ್ಚನಾ 94 ದೇಶಗಳನ್ನ ಸುತ್ತುವ ಇರಾದೆ ಹೊಂದಿದ್ದಾರೆ. ಸಂಕೇತ ಭಾಷೆ ಹಾಗೂ ಭಾರತದಲ್ಲಿ ಶ್ರವಣದೋಷ ಉಳ್ಳವರಿಗೆ ಇರುವ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವವರಿದ್ದಾರೆ.
ಭಾರತದಲ್ಲಿ ಶ್ರವಣ ದೋಷವುಳ್ಳವರಿಗೆ ಎಂದೇ ಪ್ರತ್ಯೇಕ ಕಾಲೇಜುಗಳಿಲ್ಲ. ಶಾಲಾ ಶಿಕ್ಷಣವನ್ನ ಮುಗಿಸಿದ ಬಳಿಕ ಶ್ರವಣದೋಷ ಉಳ್ಳವರು ಉನ್ನತ ಶಿಕ್ಷಣಕ್ಕೆ ಪರದಾಡಬೇಕಾಗಿದೆ. ಹೀಗಾಗಿ ಭಾರತದಲ್ಲಿ ಇಂತಹ ಸಮಸ್ಯೆ ಬಗ್ಗೆ ಗಮನಹರಿಸಬೇಕಿದೆ ಎಂದು ಅರ್ಚನಾ ಹೇಳಿದ್ದಾರೆ.