ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಮೈತ್ರಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇದು ಕೊನೆಯ ಕ್ಷಣದಲ್ಲಿ ಆಗಿರುವಂತಹ ಬೆಳವಣಿಗೆಯಾಗಿದೆ. ಪಾಲಿಕೆಯ ಸದಸ್ಯರು ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ಹೆಚ್.ಡಿ.ಕೆ. ಹೇಳಿದ್ದಾರೆ.
ಮೈತ್ರಿಗಾಗಿ ನಾವು ಯಾರ ಮನೆಬಾಗಿಲಿಗೆ ಹೋಗಿಲ್ಲ. ಬೇರೆ ಪಕ್ಷದವರೇ ನಮ್ಮ ಬಳಿಗೆ ಬಂದು ಚರ್ಚೆ ಮಾಡಿದ್ದಾರೆ. ನಮ್ಮ ಪಕ್ಷದ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದ್ದೆವು. ನಮ್ಮ ಪಕ್ಷದ ಬಗ್ಗೆ ಮಾತನಾಡುವವರ ಬಗ್ಗೆ ಸಂದೇಶ ಕೊಡಬೇಕಿತ್ತು. ಈ ಕಾರಣಕ್ಕೆ ನಾವು ನಾಮಪತ್ರ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.
ಮೈತ್ರಿ ಕೊನೆಯ ಕ್ಷಣದಲ್ಲಿ ಸ್ಥಳದಲ್ಲಿ ಆಗಿರುವ ಬದಲಾವಣೆಯಾಗಿದೆ. ಯಾವ ಸದಸ್ಯರ ಮೇಲೆ ನಿರ್ಧಾರ ಹೇರಿಕೆ ಮಾಡಿರಲಿಲ್ಲ. ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಆಕ್ರೋಶದಿಂದ ಮೈಸೂರು ಪಾಲಿಕೆ ಸದಸ್ಯರೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿಗೆ ಅಧಿಕಾರ ಕೊಡಬಾರದೆಂದು ತನ್ವೀರ್ ಸೇಠ್ ನಿರ್ಧರಿಸಿದ್ದು ಈ ಕಾರಣಕ್ಕೆ ಕಾಂಗ್ರೆಸ್ ನವರು ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನನ್ನ ಬಳಿ ಮಾತನಾಡಿ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಮನವಿ ಮಾಡಿದ್ದರು. ಆದರೆ, ಸಿದ್ದರಾಮಯ್ಯನವರಿಗೆ ಮೈತ್ರಿ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಇದರಿಂದ ಡಿಕೆಶಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ನಡೆದಿದೆ. ಮೈತ್ರಿ ವಿಚಾರದಲ್ಲಿ ಗೊಂದಲ ಉಂಟಾಗಿರುವುದಕ್ಕೆ ಸಿದ್ದರಾಮಯ್ಯನವರು ಕಾರಣ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.