ಬೆಂಗಳೂರು: ಮಹಿಳಾ ವೈದ್ಯರು ಮತ್ತು ಸಿಬ್ಬಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಬಟ್ಟೆ ಬದಲಾಯಿಸುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದ ಕಾಮುಕನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಮಾಲತೇಶ(29) ಬಂಧಿತ ಆರೋಪಿ. ಕಳೆದ ಆರು ವರ್ಷಗಳಿಂದ ಗುತ್ತಿಗೆ ಸ್ಟಾಫ್ ನರ್ಸ್ ಆಗಿ ಮಾಲತೇಶ ಕೆಲಸ ಮಾಡುತ್ತಿದ್ದಾನೆ. ಈತ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಬಟ್ಟೆ ಬದಲಿಸುತ್ತಿದ್ದ ಕೊಠಡಿಯಲ್ಲಿ ಮೊಬೈಲ್ ಚಾರ್ಜಿಂಗ್ ಹಾಕುವ ನೆಪದಲ್ಲಿ ಕ್ಯಾಮೆರಾ ಆನ್ ಮಾಡಿ ಇಡುತ್ತಿದ್ದ. ಮಹಿಳಾ ವೈದ್ಯರು ಮತ್ತು ನರ್ಸ್ ಗಳು ಬಟ್ಟೆ ಬದಲಿಸುವ ದೃಶ್ಯಗಳನ್ನು ರಹಸ್ಯವಾಗಿ ಸೆರೆಹಿಡಿಯುತ್ತಿದ್ದ.
ಫೆಬ್ರವರಿ 19 ರಂದು ಮಹಿಳಾ ವೈದ್ಯರೊಬ್ಬರು ಬಟ್ಟೆ ಬದಲಿಸುವಾಗ ಅನುಮಾನದಿಂದ ಮೊಬೈಲ್ ನೋಡಿದ್ದಾರೆ. ಅದನ್ನು ಪರಿಶೀಲಿಸಿದಾಗ ಕ್ಯಾಮೆರಾ ಆನ್ ಆಗಿರುವುದು, ಗ್ಯಾಲರಿಯಲ್ಲಿ ವಿಡಿಯೋ ರೆಕಾರ್ಡ್ ಆಗಿರುವುದು ಕಂಡುಬಂದಿದ್ದು, ಈ ಹಿಂದೆ ಹಲವು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಡಿಲೀಟ್ ಮಾಡಿರುವುದು ರಿಸೈಕಲ್ ಬಿನ್ ಫೋಲ್ಡರ್ ನಲ್ಲಿ ಪತ್ತೆಯಾಗಿದೆ.
ವೈದ್ಯೆ ಆಸ್ಪತ್ರೆ ಆಡಳಿತಾಧಿಕಾರಿಗೆ ಮಾಹಿತಿ ನೀಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ಮೊಬೈಲ್ ಜಪ್ತಿ ಮಾಡಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.