ಪಾಟ್ನಾ: ಬಿಹಾರದ ಮುಜಾಫರ್ಪುರ್ ಜಿಲ್ಲೆಯ ಮಹಾಂತ ದರ್ಶನ ದಾಸ್ ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ.
10 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ ಗರ್ಭಿಣಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಶಾಂತಿದೇವಿ(20) ಎಂಬ ಗರ್ಭಿಣಿ 10 ನೇ ತರಗತಿ ಪರೀಕ್ಷೆ ಬರೆಯಲು ಬಂದಿದ್ದು, ಶುಕ್ರವಾರ ಎರಡನೇ ಶಿಫ್ಟ್ ನಲ್ಲಿ ಆಕೆ ಪರೀಕ್ಷೆ ಬರೆಯುವಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬೇರೆ ಕೋಣೆಯಲ್ಲಿ ಆಕೆಗೆ ಪರೀಕ್ಷೆ ಬರೆಯುವಂತೆ ತಿಳಿಸಲಾಗಿದೆ.
ಆದರೆ, ಹೊಟ್ಟೆನೋವು ಜಾಸ್ತಿಯಾಗಿದ್ದರಿಂದ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಜೆ ವೇಳೆಗೆ ಶಾಂತಿದೇವಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಡಾ. ಮೀರಾ ಮಧುಮಿತಾ ತಿಳಿಸಿದ್ದಾರೆ.
ಪರೀಕ್ಷೆಯ ಸಮಯದಲ್ಲೇ ಮಗು ಜನಿಸಿದ್ದರಿಂದ ಇಮ್ತಿಹಾನ್(ಪರೀಕ್ಷೆ) ಎಂದು ಹೆಸರಿಡಲಾಗಿದೆ ಎಂದು ಮಗುವಿನ ತಂದೆ ಬಿರ್ಜು ಸಾಹ್ನಿ ಹೇಳಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಪೂರ್ವ ಚಂಪಾರಣ್ ಜಿಲ್ಲೆಯ ಮಹಿಳೆಯೊಬ್ಬರು ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ 12ನೇ ತರಗತಿ ಪರೀಕ್ಷೆ ಬರೆದಿದ್ದರು.