ಕೊರೊನಾ ಕಾಲದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚುತ್ತಿದ್ದು, ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಹಲವು ವಿಧದಲ್ಲಿ ವಂಚಿಸುವ ಮೂಲಕ ಬ್ಯಾಂಕ್ ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಹೀಗಾಗಿ ಕೆಲವರು ಹಣ ಕಳೆದುಕೊಂಡು ಕಂಗಾಲಾಗಿದ್ದು, ಇದರ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಗುರುವಾರದಂದು ಬ್ಯಾಂಕುಗಳಿಗೆ ವಿಸ್ತೃತ ಮಾರ್ಗದರ್ಶಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ್ದು, ಡಿಜಿಟಲ್ ವರ್ಗಾವಣೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ನಿಯಮಗಳನ್ನು ಬಲಪಡಿಸಲು ಜೊತೆಗೆ ಹೆಚ್ಚಿನ ನಿಯಂತ್ರಣಕ್ಕೆ ಸೂಚಿಸಲಾಗಿದೆ. ಈ ಎಲ್ಲಾ ನಿಯಮಗಳು ವ್ಯಾಲೆಟ್ ನಿರ್ವಹಣೆ ಮಾಡುವ ಸಂಸ್ಥೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಸಹ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಪೆಟ್ರೋಲ್-ಡೀಸೆಲ್ ದರ ಭಾರೀ ಏರಿಕೆ – 11 ನೇ ದಿನವೂ ಗ್ರಾಹಕರಿಗೆ ಬರೆ
ಈ ಮೊದಲು ಸಹ ಬ್ಯಾಂಕಿಂಗ್ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದೀಗ ಡಿಜಿಟಲ್ ಪಾವತಿಗಳನ್ನು ಮಾಡುವ ವೇಳೆ ಬಿಗಿ ನಿಲುವನ್ನು ಅನುಸರಿಸುವಂತೆ ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಆದೇಶಿಸಲಾಗಿದೆ. ಈ ಮೂಲಕ ಡಿಜಿಟಲ್ ಪೇಮೆಂಟ್ ವಂಚನೆಗೆ ತೆರೆಬೀಳುವ ವಿಶ್ವಾಸವನ್ನು ರಿಸರ್ವ್ ಬ್ಯಾಂಕ್ ಹೊಂದಿದೆ.