ಕಾಲುವೆಯೊಂದಕ್ಕೆ ಉರುಳಿದ ಬಸ್ನಿಂದ ಏಳು ಮಂದಿಯನ್ನು ರಕ್ಷಿಸಲು ಮುಂದಾದ ಶಿವರಾಣಿ ಲೋನಿಯಾ ಹಾಗೂ ಆಕೆಯ ನಾಲ್ವರು ಸಹೋದರರು ರಿಯಲ್ ಲೈಫ್ ಹೀರೋಗಳಾದ ಘಟನೆ ಮಧ್ಯ ಪ್ರದೇಶದಲ್ಲಿ ಜರುಗಿದೆ.
ಸಿಂಧಿ ಎಂಬ ಊರಿನಲ್ಲಿ ಕಾಲುವೆಗೆ ಬಿದ್ದಿದ್ದ ಬಸ್ನಲ್ಲಿ ಮುಳುಗಲಿದ್ದ ಮಂದಿಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಧುಮುಕಿದ ಶಿವರಾಣಿ ಹಾಗೂ ಆಕೆಯ ಸಹೋದರರ ವಯಸ್ಸು 16-22ರ ನಡುವೆ ಇದೆ.
“ವೇಗವಾಗಿ ಬರುತ್ತಿದ್ದ ಬಸ್ಸೊಂದು ಜಾರಿ ಕಾಲುವೆಯೊಳಗೆ ಬಿದ್ದಿದ್ದನ್ನು ನಾನು ನೋಡಿದೆ. ನಾನು ಹಾಗೂ ನನ್ನ ಸಹೋದರ ನೀರಿಗೆ ಧುಮುಕಿ ಇಬ್ಬರ ಪ್ರಾಣ ರಕ್ಷಿಸಿದೆವು” ಎಂದು ಲೋನಿಯಾ ತಿಳಿಸಿದ್ದಾರೆ. ಇವರಾರೂ ಸಹ ವೃತ್ತಿಪರ ಈಜುಗಾರರಲ್ಲದೇ ಇದ್ದರೂ ಈಜಲು ಚೆನ್ನಾಗಿ ಬಲ್ಲವರಾಗಿದ್ದಾರೆ.
ಶಿವರಾಣಿಯ ಸಾಹಸವನ್ನು ಮೆಚ್ಚಿಕೊಂಡ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, “ಮಗಳು ಶಿವರಾಣಿ ತೋರಿದ ಧೈರ್ಯಕ್ಕೆ ನನ್ನದೊಂದು ಸಲ್ಯೂಟ್ ಇರಲಿ. ತನ್ನ ಪ್ರಾಣವನ್ನೇ ಲೆಕ್ಕಿಸದ ಈ ಮಗಳು ಸಿಂಧಿ ಕಾಲುವೆಯಲ್ಲಿ ಮುಳುಗಲಿದ್ದ ಇಬ್ಬರ ಪ್ರಾಣ ರಕ್ಷಿಸಿದ್ದಾರೆ. ನನಗೆ ಆ ಮಗಳಿಗೆ ಧನ್ಯವಾದ ಹೇಳಲು ಇಷ್ಟ. ಇಡೀ ರಾಜ್ಯವೇ ನಿನ್ನ ಬಗ್ಗೆ ಹೆಮ್ಮೆ ಪಡುತ್ತದೆ” ಎಂದಿದ್ದಾರೆ.