ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್, 5 ಎಕರೆ ಜಮೀನು ಇರುವವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಬೇಕು ಎಂದಿರುವ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಇದೀಗ ಸ್ವಪಕ್ಷೀಯ ಸಚಿವ, ಶಾಸಕರೇ ಕಿಡಿಕಾರಿದ್ದು, ತಮ್ಮ ಸ್ವಂತ ವಿಚಾರವನ್ನು ಜನರ ಮೇಲೆ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕಿಡಿಕಾರಿರುವ ಶಾಸಕ ಸೋಮಶೇಖರ ರೆಡ್ಡಿ, ಯಾವುದೇ ನಿರ್ಧಾರವನ್ನು ಏಕಾಏಕಿ ಜಾರಿ ಮಾಡುವ ಮೊದಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಬೇಕು. ಟಿವಿ, ಫ್ರಿಡ್ಜ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುತ್ತದೆ. ಬೈಕ್ ನ್ನು ಸಾಲ ಮಾಡಿ ಕೂಡ ಕೊಂಡುಕೊಳ್ಳುತ್ತಾರೆ. ಹೀಗಿರುವಾಗ ಬಿಪಿಎಲ್ ಕಾರ್ಡ್ ನ್ನೇ ರದ್ದು ಮಾಡುವುದು ತಪ್ಪು. ನಿಜವಾದ ಬಡತನವನ್ನು ಜನರ ಆರ್ಥಿಕ ಮಟ್ಟದಿಂದ ಗುರುತಿಸಬೇಕು. ಸಚಿವರ ಈ ನಿರ್ಧಾರದ ವಿರುದ್ಧ ಹೋರಾಡುತ್ತೇವೆ ಎಂದಿದ್ದಾರೆ.
ಮತ್ತೆ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಗುಡುಗಿದ ಶಾಸಕ ಯತ್ನಾಳ್
ಇದೇ ವೇಳೆ ಸಚಿವ ಸುರೇಶ್ ಕುಮಾರ್ ಕೂಡ ಉಮೇಶ ಕತ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಟಿವಿ ಇದ್ದ ಮಾತ್ರಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಸರಿಯಲ್ಲ. ಸಚಿವರ ಇಂಥಹ ನಿರ್ಧಾರದ ಬಗ್ಗೆ ಅವರ ಬಳಿಯೇ ನಾನು ಚರ್ಚೆ ನಡೆಸುತ್ತೇನೆ ಎಂದಿದ್ದಾರೆ. ಇನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಉಮೇಶ್ ಕತ್ತಿ ಹೇಳಿಕೆ ನಾನೂ ಗಮನಿಸಿದ್ದೇನೆ. ಅವರು ಯಾವ್ಯಾವ ವಿಚಾರವನ್ನು ಇಟ್ಟುಕೊಂಡು ಬಿಪಿಎಲ್ ಕಾರ್ಡ್ ರದ್ದು ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ ಎಂದು ಹೇಳಿದ್ದಾರೆ.