ಭಾರತ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ನಲ್ಲಿ ಸಿಕ್ಕಾಪಟ್ಟೆ ಸುಧಾರಣೆ ಕಂಡಿದೆ. ಹಿಂದಿನ ವರ್ಷ ಅಂದರೆ 2020ರಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸರಿ ಸುಮಾರು 70 ಕೋಟಿ ಆಸುಪಾಸಿಗೆ ಬಂದು ತಲುಪಿದೆ.
ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಇಂಟರ್ನೆಟ್ ಬಳಕೆದಾರರಿಗೆ ಬರಗಾಲವೇ ಇಲ್ಲ. ಒಮ್ಮೆ ಯೋಚಿಸಿ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ ಹ್ಯಾಕರ್ಸ್ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಹೀಗಾಗಿ ಇಂಟರ್ನೆಟ್ ಬಳಕೆ ಮಾಡುವ ನಾವು ಪಾಸ್ವರ್ಡ್ಗಳ ವಿಚಾರದಲ್ಲಿ ಎಷ್ಟು ಜಾಗರೂಕರಾಗಿ ಇದ್ದರೂ ಸಹ ಕಡಿಮೆಯೇ. ನಿಮ್ಮ ಪಾಸ್ವರ್ಡ್ ಎಷ್ಟು ದುರ್ಬಲವಾಗಿ ಇರುತ್ತದೋ ಹ್ಯಾಕರ್ಸ್ಗೆ ನಿಮ್ಮ ಮೇಲೆ ಸೈಬರ್ ದಾಳಿ ನಡೆಸೋದು ಅಷ್ಟೇ ಸುಲಭದ ಕೆಲಸವಾಗಿ ಪರಿಣಮಿಸುತ್ತೆ.
ಈ ಬಗೆಗಿನ ಜಾಗೃತಿಗಾಗಿ ಇಂದಿನ ದಿನವನ್ನ ಸೇಫರ್ ಇಂಟರ್ನೆಟ್ ಡೇ ಇಂದು ವಿಶ್ವಾದ್ಯಂತ ಆಚರಿಸಲಾಗುತ್ತೆ. ಸೇಫರ್ ಇಂಟರ್ನೆಟ್ ಡೇ ವಿಶೇಷವಾಗಿ ಪಾಸ್ವರ್ಡ್ಗಳ ವಿಚಾರದಲ್ಲಿ ಕೆಲವೊಂದು ಸಲಹೆ ಇಲ್ಲಿದೆ ನೋಡಿ.
ಒಂದು ವೇಳೆ ನೀವು ಸ್ಟ್ರಾಂಗ್ ಪಾಸ್ವರ್ಡ್ ಇಡಬೇಕು ಎಂದು ಬಯಸಿದ್ದರೆ ಕಡಿಮೆ ಎಂದರೂ 8 ಅಕ್ಷರಗಳನ್ನ ನಮೂದಿಸಿ. ಇದರಲ್ಲಿ ಕ್ಯಾಪಿಟಲ್, ಸ್ಮಾಲ್ ಅಕ್ಷರಗಳು, ಸಂಖ್ಯೆ ಹಾಗೂ ಚಿಹ್ನೆಗಳನ್ನ ಬಳಕೆ ಮಾಡಿ. ನೀವಿಡುವ ಪಾಸ್ವರ್ಡ್ನ್ನು ಯಾರಿಂದಲೂ ಊಹೆ ಮಾಡೋಕೂ ಸಾಧ್ಯವಾಗದಂತಿರಲಿ.
ನಿಮ್ಮ ಪಾಸ್ವರ್ಡ್ನಲ್ಲಿ ಹೆಸರು, ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಈ ರೀತಿ ಯಾವುದೇ ನಿಮ್ಮ ವೈಯಕ್ತಿಕ ಮಾಹಿತಿ ಹಾಕಬೇಡಿ. ಅಲ್ಲದೇ ಯಾರೊಂದಿಗಾದರೂ ನೀವು ಪಾಸ್ವರ್ಡ್ ಶೇರ್ ಮಾಡಲೇಬೇಕಾದ ಅನಿವಾರ್ಯತೆ ಬಂತು ಅಂದರೆ ಕೂಡಲೇ ಅದನ್ನ ಬದಲಾಯಿಸಿಬಿಡಿ.
ಪಾಸ್ವರ್ಡ್ ನೆನಪಿನಲ್ಲಿ ಇರೋದಿಲ್ಲ ಅಂತಾ ಅನೇಕರು ಮೊಬೈಲ್, ಜನ್ಮ ದಿನಾಂಕ ಹಾಗೂ ತಮ್ಮ ಹೆಸರನ್ನೇ ಪಾಸ್ವರ್ಡ್ ಆಗಿ ಮಾಡಿಕೊಂಡಿರ್ತಾರೆ. ಈ ರೀತಿ ಮಾಡೋದ್ರಿಂದ ನೀವು ಹ್ಯಾಕರ್ಸ್ಗೆ ಕೆಲಸವನ್ನ ಇನ್ನಷ್ಟು ಸುಲಭ ಮಾಡಿಕೊಟ್ಟಂತಾಗುತ್ತೆ. ಯಾರದ್ದೇ ಪಾಸ್ವರ್ಡ್ನ್ನು ಹ್ಯಾಕ್ ಮಾಡುವ ಮುನ್ನ ಹ್ಯಾಕರ್ಸ್ ಮೊದಲು ಇಂತಹ ಪಾಸ್ವರ್ಡ್ಗಳನ್ನೇ ಬಳಕೆ ಮಾಡ್ತಾರೆ. ಹೀಗಾಗಿ ಯಾವಾಗಲು ವಿಭಿನ್ನವಾದ ಪಾಸ್ವರ್ಡ್ಗಳನ್ನೇ ಆಯ್ಕೆ ಮಾಡಿ.
ಕೆಲವೊಮ್ಮೆ ನಾವು ನಮ್ಮ ಎಲ್ಲಾ ಸಾಮಾಜಿಕ ಜಾಲತಾಣದ ವೇದಿಕೆಗೆ ಒಂದೇ ಪಾಸ್ವರ್ಡ್ ಇಟ್ಟುಬಿಡ್ತೇವೆ. ಹೀಗಾಗಿ ಒಂದು ಪಾಸ್ವರ್ಡ್ನ ಸುಳಿವು ಹ್ಯಾಕರ್ಸ್ಗೆ ಗೊತ್ತಾಯ್ತು ಅಂದರೆ ನಿಮ್ಮೆಲ್ಲ ಖಾತೆಗಳನ್ನ ಹ್ಯಾಕ್ ಮಾಡಲಾಗುತ್ತೆ. ಹೀಗಾಗಿ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಿಗೆ ಬೇರೆ ಬೇರೆ ಪಾಸ್ವರ್ಡ್ಗಳನ್ನ ಇಡೋದು ಒಳ್ಳೆಯದು.