8 ವರ್ಷ ವಯಸ್ಸಿನವಳಾದಾಗಿನಿಂದ ಕಾಂಪ್ಲೆಕ್ಸ್ ರೀಜನಲ್ ಪೇನ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ ಕೊನೆಗೂ ಈ ಭಯಾನಕ ಕಾಯಿಲೆ ಪರಿಣಾಮಗಳಿಂದ ಬಚಾವಾಗಿದ್ದಾಳೆ.
ರೂಬಿ ಚಾಂಬರ್ಲೇನ್ ಎಂಬ ಯುವತಿ ತನ್ನ ಬಾಲ್ಯದಲ್ಲಿ ಮೊದಲ ಬಾರಿಗೆ ಪಾದದಲ್ಲಿ ಈ ನೋವನ್ನ ಅನುಭವಿಸಿದಳು. ಕ್ರಮೇಣ ಈ ನೋವು ಆಕೆಯ ಕೆಳ ದೇಹದ ತುಂಬೆಲ್ಲ ಹರಡಿತ್ತು. ಇದರಿಂದಾಗಿ ಆಕೆಗೆ ಯಾವುದೇ ಆಧಾರವಿಲ್ಲದೇ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೂ ಅರ್ಧ ಗಂಟೆಗಿಂತ ಹೆಚ್ಚು ಕಾಲ ನಿದ್ರೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ..!
ಸಿಆರ್ಪಿಎಸ್ ಎಂಬ ಕಾಯಿಲೆ ಬಗ್ಗೆ ಹೆಚ್ಚೇನು ತಿಳಿಯದ ರೂಬಿ 11ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದಳು. ಫಿಸಿಯೋ ಥೆರಪಿ, ಬಲವಾದ ಪೇನ್ ಕಿಲ್ಲರ್, ಇಂಜೆಕ್ಷನ್ ಹೀಗೆ 100ಕ್ಕೂ ಹೆಚ್ಚು ಚಿಕಿತ್ಸೆಗೆ ಒಳಗಾಗಿದ್ದಳು. ಆದರೆ ಇದ್ಯಾವುದು ಕೂಡ ಆಕೆಗೆ ಸಹಾಯವಾಗಲಿಲ್ಲ.
ನನಗೀಗ 22 ವರ್ಷ. ನನಗೆ ನನ್ನ ಗೆಳೆಯರನ್ನೂ ಭೇಟಿಯಾಗೋಕೆ ಸಾಧ್ಯವಾಗ್ತಿರಲಿಲ್ಲ. ಅಲ್ಲದೇ ನನ್ನ ಉದ್ಯೋಗವನ್ನೂ ಬಿಡಬೇಕಾಯ್ತು. ಅಲ್ಲದೇ ಅರ್ಧ ಗಂಟೆಗಿಂತ ಹೆಚ್ಚು ಕಾಲ ನನಗೆ ನಿದ್ರೆ ಮಾಡೋಕೂ ಸಾಧ್ಯವಾಗ್ತಿರಲಿಲ್ಲ ಎಂದು ರೂಬಿ ತನ್ನ ಕಷ್ಟವನ್ನ ಹೇಳಿಕೊಂಡಿದ್ದಾಳೆ.
ಕೊನೆಗೂ ಈಕೆ ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆಗೆ ಒಳಗಾದ್ರು. ಈ ಶಸ್ತ್ರ ಚಿಕಿತ್ಸೆ ಬಳಿಕ ಆಕೆ ಬೆನ್ನಿಗೆ ಬ್ಯಾಟರಿಯನ್ನ ಅಳವಡಿಸಲಾಗಿದೆ. ಹಾಗೂ ಅದನ್ನ ಆಕೆಯ ಮೊಣಕೈಯಲ್ಲಿ ಅಳವಡಿಸಲಾದ ಎಲೆಕ್ಟ್ರೋಡ್ಸ್ ಜೊತೆ ಸಂಪರ್ಕ ಮಾಡಲಾಗಿದೆ.
ರೂಬಿ ರಿಮೋಟ್ನಿಂದ ಬಟನ್ ಒತ್ತಿದರೆ ಸಾಕು ಈ ಎಲೆಕ್ಟ್ರೋಡ್ಸ್ಗಳು ಆಕೆಯ ಮೆದುಳಿಗೆ ನೋವಿನ ಸಂದೇಶವನ್ನ ತಲುಪಿಸೋಕೇ ಬಿಡೋದಿಲ್ಲ. ಹೀಗಾಗಿ ಆಕೆ ಆರಾಮಾಗಿ ನಿದ್ದೆ ಮಾಡಬಹುದಾಗಿದೆ. ಹೀಗಾಗಿ ಈಕೆ ಈ ರಿಮೋಟ್ ಕಂಟ್ರೋಲ್ನ ನೆರವಿನಿಂದ ಈಕೆ ಈಗ ವ್ಯಾಸಂಗ ಮುಂದುವರಿಸಿದ್ದಾಳೆ. ಯೋಗಾಸನ ಮಾಡುತ್ತಾಳೆ ಹಾಗೂ ಆರಾಮಾಗಿ ನಿದ್ದೆಯನ್ನೂ ಮಾಡುತ್ತಿದ್ದಾಳೆ.