ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ರಾಯಲ್ ಎನ್ಫೀಲ್ಡ್ 22-01-2021 12:50PM IST / No Comments / Posted In: Business, Latest News ರಾಯಲ್ ಎನ್ಫೀಲ್ಡ್ ಬೈಕ್ ಅಂದ್ರೆ ನನಗಿಷ್ಟ ಇಲ್ಲ ಅನ್ನೋ ಬೈಕ್ ಪ್ರಿಯರು ಸಿಗೋದೇ ಕಡಿಮೆ. ವಿಶೇಷವಾದ ಡಿಸೈನ್ಗಳ ಮೂಲಕ ರಾಯಲ್ ಎನ್ಫೀಲ್ಡ್ ಬೈಕ್ಗಳು ಗ್ರಾಹಕರ ಗಮನವನ್ನ ಸೆಳೆಯುತ್ತಲೇ ಬಂದಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನ ಗಮನದಲ್ಲಿಟ್ಟುಕ್ಕೊಂಡು ರಾಯಲ್ ಎನ್ಫೀಲ್ಡ್ ಹಿಮಾಲಯನ್ ಕೆಲವೇ ದಿನಗಳಲ್ಲಿ ಮೂರು ಹೊಸ ಅವತಾರಗಳಲ್ಲಿ ನಿಮ್ಮ ಮುಂದೆ ಬರಲಿದೆ. ವಿನ್ಯಾಸದ ವಿಚಾರಕ್ಕೆ ಬಂದರೆ ಪರಿಷ್ಕೃತ ಹಿಮಾಲಯನ್ ಬೈಕ್ಗಳು ಮೊದಲಿದ್ದ ವಿನ್ಯಾಸವನ್ನೇ ಮುಂದುವರಿಸಲಿವೆ. ಸಣ್ಣ ಸಣ್ಣ ಬದಲಾವಣೆ ಅಂದರೆ ಫ್ಯುಯಲ್ ಟ್ಯಾಂಕ್ನ ಬಳಿ ಕೆಲ ಬದಲಾವಣೆಗಳನ್ನ ತರಲಾಗಿದೆ. ಆದರೆ ಪರಿಷ್ಕೃತ ಹಿಮಾಲಯನ್ ಬೈಕ್ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಬಣ್ಣದ ಬೈಕ್ಗಳು ಆಯ್ಕೆಗೆ ಸಿಗಲಿದೆ. ಈ ಬಾರಿ ಹಿಮಾಲಯನ್ ಬೆಳ್ಳಿ, ಮ್ಯಾಟ್ ಕಪ್ಪು ಹಾಗೂ ಪೈನ್ ಹಸಿರು ಬಣ್ಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬಹುಶಃ ಈಗಿರುವ ಬಿಳಿ ಬಣ್ಣದ ಬೈಕ್ಗಳನ್ನ ಕಂಪನಿ ನಿಲ್ಲಿಸುವ ಸಾಧ್ಯತೆ ಇದೆ. ಈ ಜಾಗಕ್ಕೆ ಗ್ರೇವೆಲ್ ಗ್ರೇ, ಸ್ಲೀಟ್ ಗ್ರೇ, ಸ್ನೋ ವೈಟ್, ಗ್ರಾನೈಟ್ ಬ್ಲ್ಯಾಕ್, ರಾಕ್ ರೆಡ್ ಮತ್ತು ಲೇಕ್ ಬ್ಲೂ ಬಣ್ಣಗಳ ಆಯ್ಕೆಯನ್ನ ನೀಡಲಾಗುತ್ತೆ. 2021ರ ಹಿಮಾಲಯನ್ ಬೈಕ್ನ ಪ್ರಮುಖ ನವೀಕರಣ ಅಂದರೆ ಟ್ರಿಪ್ಪರ್ ನ್ಯಾವಿಗೇಷನ್. ರಾಯಲ್ ಎನ್ಫೀಲ್ಡ್ ಮೆಟೋರ್ 350 ಬೈಕ್ನಲ್ಲಿ ಮೊದಲು ಇದನ್ನ ಪರಿಚಯಿಸಲಾಗಿತ್ತು. ಇದು ನ್ಯಾವಿಗೇಷನ್ ಪರದೆಯನ್ನ ಹೊಂದಿರೋದ್ರಿಂದ ನೀವು ಮೊಬೈಲ್ನಲ್ಲಿ ಮ್ಯಾಪ್ ನೋಡೋದು ತಪ್ಪುತ್ತೆ. ನಿಮ್ಮ ಮೊಬೈಲ್ನ್ನ ಈ ಸ್ಕ್ರೀನ್ ಜೊತೆ ಕನೆಕ್ಟ್ ಮಾಡಿದ ಬಳಿಕ ಬೈಕ್ನ ನೇವಿಗೇಷನ್ ಸ್ಕ್ರೀನ್ನಲ್ಲೇ ನಿಮಗೆ ನೀವು ತಲುಪಬೇಕಾದ ಜಾಗದ ನಕ್ಷೆ ಕಾಣಲಿದೆ. ಇದು ಇಂಜಿನ್ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಈಗಿರುವ ಹಿಮಾಲಯನ್ ಬೈಕ್ಗಿಂತ ಪರಿಷ್ಕೃತ ಬೈಕ್ನ ಬೆಲೆ ಕೊಂಚ ಹೆಚ್ಚಿರಲಿದೆ. ಪ್ರಸ್ತುತ ಹಿಮಾಲಯನ್ ಮಾಡಲ್ 1.91 ಲಕ್ಷದಿಂದ 1.96 ಲಕ್ಷಕ್ಕೆ ಸಿಗುತ್ತೆ.