ಭಾರತ, ಬಾಂಗ್ಲಾ ದೇಶಕ್ಕೆ 20 ಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನ ಕಳುಹಿಸೋಕೆ ಯೋಜನೆಯನ್ನ ರೂಪಿಸುತ್ತಿದ್ದರೆ ಇತ್ತ ಪಾಕಿಸ್ತಾನ ಭಾರತದಲ್ಲಿ ತಯಾರಾಗಿರುವ ಕೊರೊನಾ ಲಸಿಕೆಗಳನ್ನ ಜಾಗತಿಕ ಮೈತ್ರಿ ಮೂಲಕ ಇಲ್ಲವೇ ದ್ವಿಪಕ್ಷೀಯ ಮಾತುಕತೆ ಮೂಲಕ ಪಡೆಯಲು ಮಾರ್ಗಗಳನ್ನ ಹುಡುಕುತ್ತಿದೆ.
ಸೋಮವಾರ ಈ ವಿಚಾರವಾಗಿ ಹೇಳಿಕೆ ನೀಡಿದ್ದ ಬಾಂಗ್ಲಾ ದೇಶದ ಅಧಿಕಾರಿಗಳು ಜನವರಿ 20ರಂದು ವಿಶೇಷ ವಿಮಾನದ ಮೂಲಕ ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಆಕ್ಸ್ಫರ್ಡ್ – ಆಸ್ಟ್ರೇಜೆನಿಕಾದ ಕೋವಿಶೀಲ್ಡ್ ಲಸಿಕೆಗಳನ್ನ ಡಾಕಾಗೆ ತರಿಸಲಿದೆ. ಈ ಲಸಿಕೆಗಳನ್ನ ಢಾಕಾದಲ್ಲಿರುವ ಭಾರತೀಯ ಹೈ ಕಮಿಷನ್ ಬಾಂಗ್ಲಾ ಸರ್ಕಾರಕ್ಕೆ ಹಸ್ತಾಂತರ ಮಾಡಲಿದೆ. ಬಾಂಗ್ಲಾದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈವರೆಗೆ ಸರಿ ಸುಮಾರು 7,900 ಮಂದಿ ಸಾವನ್ನಪ್ಪಿದ್ದಾರೆ.
ಇತ್ತ ಪಾಕಿಸ್ತಾನ ಕೂಡ ಭಾರತದಿಂದ ಲಸಿಕೆಗಳನ್ನ ಪಡೆಯೋಕೆ ಹೊಸ ಮಾರ್ಗಗಳನ್ನ ಅನ್ವೇಷಣೆ ಮಾಡುತ್ತಿದೆ. ಪಾಕಿಸ್ತಾನದ ಡ್ರಗ್ ರೆಗ್ಯೂಲೇಟರಿ ಅಥಾರಿಟಿ ಆಕ್ಸ್ಫರ್ಡ್ – ಆಸ್ಟ್ರೆಜೆನಿಕಾದ ಕೋವಿಶೀಲ್ಡ್ ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಿದೆ. ಪಾಕಿಸ್ತಾನದಲ್ಲಿ ಒಟ್ಟು 5 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಈವರೆಗೆ 11 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
ಜಿಎವಿಐ, ಸಿಇಪಿಐ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಒಂದಾಗಿ ಸ್ಥಾಪಿಸಿದ ಕೋವಾಕ್ಸ್ ಮೂಲಕ ಲಸಿಕೆಗಳನ್ನ ಪಡೆಯೋಕೆ ಇಸ್ಲಾಮಾಬಾದ್ನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೈತ್ರಿಕೂಟವು ಪಾಕ್ ಸೇರಿದಂತೆ ಸುಮಾರು 190 ದೇಶಗಳಿಗೆ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 20ರಷ್ಟು ಮಂದಿಗೆ ಉಚಿತ ಲಸಿಕೆಗಳನ್ನ ನೀಡೋದಾಗಿ ಭರವಸೆ ನೀಡಿತ್ತು. ಹೀಗಾಗಿ 2021 ಎರಡನೇ ತ್ರೈಮಾಸಿಕದ ಆರಂಭದಲ್ಲಿ ಕೋವಾಕ್ಸ್ನಿಂದ ಮೊದಲ ರವಾನೆಯನ್ನ ಪಡೆಯೋಕೆ ಪಾಕ್ ಪ್ಲಾನ್ ಮಾಡ್ತಿದೆ.
ದೇಶದ ಉಳಿದ ಜನಸಂಖ್ಯೆಗೆ ಆಕ್ಸ್ಫರ್ಡ್ – ಆಸ್ಟ್ರೆಜೆನಿಕಾ ಲಸಿಕೆ ಹಾಗೂ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ನ್ನೂ ದ್ವಿಪಕ್ಷೀಯ ವ್ಯವಸ್ಥೆ ಮೂಲಕ ಸಂಗ್ರಹಿಸಲು ಪಾಕ್ ಮುಂದಾಗಿದೆ. ಇಲ್ಲವೇ ಮೂರನೇ ದೇಶದ ಸಹಾಯವನ್ನ ಪಡೆದು ಪಾಕ್ ಭಾರತದಿಂದ ಲಸಿಕೆ ಖರೀದಿ ಮಾಡಬಹುದಾಗಿದೆ.
ಭಾರತ ಹಾಗೂ ಪಾಕ್ ನಡುವಿನ ವೈಮನಸ್ಯ ದ್ವಿಪಕ್ಷೀಯ ವ್ಯಾಪಾರವನ್ನ ಸ್ಥಗಿತಗೊಳಿಸಲಾಗಿದೆ. ಆದರೆ ಜೀವ ಉಳಿಸುವ ಸಂಜೀವಿನಿಗಳಾಗಿರುವ ಲಸಿಕೆಗಳ ಪೂರೈಕೆ ವಿಚಾರದಲ್ಲಿ ಈ ನಿರ್ಬಂಧಗಳನ್ನ ಸಡಿಲಗೊಳಿಸಲಾಗಿದೆ.