ಜನವರಿ 20ರಂದು ಅಮೆರಿಕದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನ ಉಡ್ತಾರಾ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗ್ತಿದೆ.
ಅಂದಹಾಗೆ ಕಮಲಾ ಹ್ಯಾರೀಸ್ ಉಡುಪಿನ ವಿಚಾರ ಇಷ್ಟರ ಮಟ್ಟಿಗೆ ಚರ್ಚೆಯಾಗೋಕೆ ಕಾರಣಾನೂ ಇದೆ. 2019ರಲ್ಲಿ ಏಷ್ಯನ್ ಅಮೆರಿಕನ್ ಗುಂಪೊಂದು ಒನ್ ಎಪಿಐಎ ನೆವಾಡಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರೊಬ್ಬರು, ನೀವು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರೆ ಭಾರತೀಯ ಸಾಂಪ್ರದಾಯಿಕ ಉಡುಪನ್ನ ಧರಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದರು.
ಪ್ರೇಕ್ಷಕರೊಬ್ಬರ ಈ ಪ್ರಶ್ನೆಗೆ ಕಮಲಾ ಮೊದಲು ಗೆಲ್ಲೋಣ ಎಂದು ನಗುತ್ತಲೇ ಉತ್ತರಿಸಿದ್ದರು. ಅಲ್ಲದೇ ನನ್ನ ತಾಯಿ, ಸಾಂಸ್ಕೃತಿಕ ಹಿನ್ನೆಲೆ ನಮ್ಮ ಹೆಮ್ಮೆ ಎಂದು ಹೇಳುತ್ತಲೇ ನಮ್ಮನ್ನ ಬೆಳೆಸಿದ್ದಾರೆ ಎಂದು ಹೇಳಿದ್ದರು.
ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈನಲ್ಲಿ ಜನಿಸಿದವರಾಗಿದ್ದು ಅಮೆರಿಕಕ್ಕೆ ವಲಸೆ ಹೋಗಿದ್ದರು. ಕಮಲಾ ತಂದೆ ಜಮೈಕಾದವರಾಗಿದ್ದಾರೆ.
ಪದಗ್ರಹಣ ದಿನದಂದು ಕಮಲಾ ಯಾವ ಉಡುಗೆ ತೊಡುತ್ತಾರೆ ಅನ್ನೋದು ಅಷ್ಟೊಂದು ಪ್ರಮುಖ ವಿಚಾರ ಅಲ್ಲದೇ ಇದ್ದರೂ ಸಹ, ಅವರೇನಾದರೂ ಭಾರತೀಯ ಉಡುಗೆ ಧರಿಸಿದ್ರೆ ಬಿಡೆನ್ – ಹ್ಯಾರಿಸ್ ಆಡಳಿತ ವಿಶ್ವದ ಮೇಲೆ ಹೇಗೆ ಪ್ರಭಾವ ಬೀರಲು ಯತ್ನಿಸ್ತಾರೆ ಅನ್ನೋದನ್ನ ತೋರಿಸುತ್ತೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸುಂದರವಾಗಿ ನೇಯ್ದ ಬನಾರಸಿ ಸೀರೆಯಲ್ಲಿ ಪದಗ್ರಹಣ ವೇದಿಕೆಯ ಮೇಲೆ ನಾನು ಕಮಲಾರನ್ನೂ ನೋಡಿದ್ರೂ ಆಶ್ಚರ್ಯವಿಲ್ಲ ಎಂದು ಫ್ಯಾಶನ್ ಡಿಸೈನರ್ ಬಿಭು ಮೊಹಾಪಾತ್ರ ಹೇಳಿದ್ದರು.