ತಾಂಡವ್……ಅಮೆಜಾನ್ ಪ್ರೈಮ್ನಲ್ಲಿ ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆದ ವೆಬ್ ಸಿರೀಸ್ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದೆ. ವೆಬ್ಸಿರೀಸ್ ಹಿಂದೂ ದೇವರುಗಳನ್ನ ಅವಮಾನಿಸಿದ ಆರೋಪದ ಹಿನ್ನೆಲೆ ಚಿತ್ರ ತಯಾರಕರು ಹಾಗೂ ಸ್ಟ್ರೀಮಿಂಗ್ ಸೇವೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಬಂಧನದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಮಾಹಿತಿ ಹಾಗೂ ಪ್ರಸರಣ ಸಚಿವಾಲಯ ಅಮೆಜಾನ್ ಪ್ರೈಮ್ಗೆ ಈ ಬಗ್ಗೆ ವಿವರಣೆ ನೀಡುವಂತೆ ಕೇಳಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಪ್ರಕರಣ ದಾಖಲಾಗಿದೆ.
ಸೈಫ್ ಅಲಿ ಖಾನ್ ಹಾಗೂ ಡಿಂಪಲ್ ಕಪಾಡಿಯಾ ಅಭಿನಯದ ವೆಬ್ ಸಿರೀಸ್ ತಾಂಡವ್ನ ನಿರ್ದೇಶಕ, ನಿರ್ಮಾಪಕ, ಬರಹಗಾರ ಹಾಗೂ ಅಮೆಜಾನ್ ಇಂಡಿಯಾ ಕಂಟೆಂಟ್ ಮುಖ್ಯಸ್ಥನ ವಿರುದ್ಧ ಧಾರ್ಮಿಕ ವೈರತ್ವ ಉತ್ತೇಜಿಸುವ ಹಾಗೂ ಪೂಜಾ ಸ್ಥಳವನ್ನ ಅಪವಿತ್ರಗೊಳಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ನೋದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಯುಪಿ ಸಿಎಂ ಯೋಗಿ ಆದಿತ್ಯನಾಥ್ರ ಮಾಧ್ಯಮ ಸಲಹೆಗಾರ ಶಲಾಭ್ ಮಣಿ ತ್ರಿಪಾಠಿ ದೂರಿನ ಪ್ರತಿಯನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ರ ಉತ್ತರ ಪ್ರದೇಶದಲ್ಲಿ ಜನರ ಭಾವನೆಯೊಂದಿಗೆ ಆಟವಾಡಲು ಯಾವುದೇ ಅಧಿಕಾರ ಇಲ್ಲ. ಧಾರ್ಮಿಕ ಭಾವನೆಯ ನಡುವೆ ದ್ವೇಷವನ್ನ ಹರಡುತ್ತಿರುವ ಇಡೀ ತಾಂಡವ್ ತಂಡದ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಬಂಧನಕ್ಕೆ ಸಿದ್ಧರಾಗಿ ಎಂದು ಟ್ವಿಟರ್ನಲ್ಲಿ ಶಲಾಭ್ ಮಣಿ ತ್ರಿಪಾಠಿ ಬರೆದುಕೊಂಡಿದ್ದಾರೆ.