ವಿಜಯನಗರಂ ಜಿಲ್ಲೆಯ ಸಲೂರು ಮಂಡಲದ ಶಿವರಾಂಪುರಂನ ಕೆಲ ಗ್ರಾಮಸ್ಥರು ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ಗಳನ್ನ ಸ್ವೀಕಾರ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.
ಡಿಸೆಂಬರ್ 29ರಂದು 13,000 ರೂಪಾಯಿಯಿಂದ ಹಿಡಿದು 15,000 ರೂಪಾಯಿವರೆಗಿನ ಹಣವನ್ನ ಈ ಗ್ರಾಮದ ಸುಮಾರು 200 ಮಂದಿಯ ಖಾತೆಗೆ ಜಮಾ ಮಾಡಲಾಯ್ತು. ಗ್ರಾಮಸ್ಥರು ಕೂಡ ಯಾವುದೇ ದೂರನ್ನ ನೀಡದೇ ಹಣವನ್ನ ಸ್ವೀಕರಿಸಿದ್ದಾರೆ.
ಕೆಲವೊಂದು ಕಡೆಗಳಲ್ಲಂತೂ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಸದಸ್ಯರ ಖಾತೆಗೆ ಹಣ ಜಮಾ ಆಗಿದೆ. ಅಂದಹಾಗೆ ಈ ಹಣ ಯಾವುದೇ ಸರ್ಕಾರಿ ಯೋಜನೆಗೆ ಸಂಬಂಧಿಸಿದ್ದಲ್ಲ. ಕೆಲ ಫಲಾನುಭವಿಗಳು ಎಟಿಎಂನಲ್ಲಿ ಹಣ ತೆಗೆಯಲು ಆರಂಭಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಇದು ಅಪರಿಚಿತ ಮೂಲದ ಹಣವಾಗಿದ್ದರಿಂದ ಖಾತೆಯಿಂದ ಹಣ ವಾಪಾಸ್ಸಾಗಿ ಬಿಟ್ಟರೆ ಅಂತಾ ಭಯದಿಂದ ಯಾರು ಕೂಡ ಬ್ಯಾಂಕ್ ಅಲ್ಲವೇ ಸರ್ಕಾರಿ ಅಧಿಕಾರಿಗಳಿಗೆ ದೂರನ್ನ ನೀಡಿಲ್ಲ.
ಇನ್ನು ಈ ಬಗ್ಗೆ ಮಾತನಾಡಿದ ಸಲೂರು ಮಂಡಲ್ ಪರಿಷತ್ ಅಭಿವೃದ್ಧಿ ಅಧಿಕಾರಿ ಪಾರ್ವತಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದು ಯಾವುದೇ ಸರ್ಕಾರಿ ಯೋಜನೆಯಲ್ಲ. ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚಿಸಿ ಸತ್ಯವನ್ನ ಕಂಡು ಹಿಡಿಯುತ್ತೇನೆ ಎಂದು ಹೇಳಿದ್ದಾರೆ.