ಐದು ವರ್ಷಗಳ ಕಾಲ ಉತ್ತರ ಪ್ರದೇಶದ ತೃತೀಯ ಲಿಂಗಿ ಸಮುದಾಯದವರು ಎದುರಿಸುತ್ತಿರುವ ಸಂಕಷ್ಟ ಹಾಗೂ ಸವಾಲುಗಳನ್ನ ಅಧ್ಯಯನ ನಡೆಸಿದ ರಂಜನಾ ಅರ್ಗವಾಲ್ ತಮ್ಮ ಎಲ್ಲಾ ಆಭರಣಗಳನ್ನ ಮಾರಿ ಈ ಸಮುದಾಯಕ್ಕಾಗಿ ಭೂಮಿಯನ್ನ ಖರೀದಿಸಿದ್ದಾರೆ. ಈ ಭೂಮಿಯಲ್ಲಿ ತೃತೀಯ ಲಿಂಗಿಗಳಿಗೆ ಆಶ್ರಯ ನೀಡುವ ಉದ್ದೇಶವನ್ನ ರಂಜನಾ ಹೊಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ರೀತಿ ತೃತೀಯ ಲಿಂಗಿಗಳಿಗಾಗಿ ಮನೆ ನಿರ್ಮಾಣ ಮಾಡಿಕೊಡ್ತಿರುವ ಮೊದಲ ಮಹಿಳೆ ರಂಜನಾ ಅರ್ಗವಾಲ್ ಆಗಿದ್ದಾರೆ. ತೃತೀಯ ಲಿಂಗಿಗಳಿಗೆ ಉದ್ಯೋಗ ಪಡೆದು ಸಮಾಜದಿಂದ ಕನಿಷ್ಟ ಬೆಂಬಲವನ್ನೂ ಪಡೆಯೋದು ಎಷ್ಟು ಕಷ್ಟದ ವಿಚಾರ ಎಂಬುದನ್ನ ಅರಿತ ರಂಜನಾ ತಮ್ಮೆಲ್ಲಾ ಆಭರಣಗಳನ್ನ ಮಾರಾಟ ಮಾಡಿ ಬಂದ 2 ಲಕ್ಷ ರೂಪಾಯಿ ಹಣದಲ್ಲಿ ಜಾಗ ಖರೀದಿ ಮಾಡಿದ್ದಾರೆ.
ಆಶ್ರಯ ಮನೆ ನಿರ್ಮಾಣಕ್ಕೆ ಅಡಿಪಾಯ ತೋಡಲಾಗಿದ್ದು, ಸುಮಾರು 20 ಜನರಿಗೆ ವಾಸಿಸಲು ಈ ಮನೆ ಯೋಗ್ಯವಾಗಿರಲಿದೆ. ಅರ್ಗವಾಲ್ ತನ್ನ ಪತಿ ಇಬ್ಬರು ಗಂಡು ಮಕ್ಕಳು ಹಾಗೂ ಸೊಸೆಯಂದಿರ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆದರೆ ತೃತೀಯ ಲಿಂಗಿಗಳಿಗೆ ಬಾಡಿಗೆ ಮನೆ ಸಿಗೋದು ಕಷ್ಟ ಎಂಬ ಕಾರಣಕ್ಕೆ ಈ ಸಮುದಾಯಕ್ಕೆ ಶಾಶ್ವತ ಆಸರೆ ನೀಡಲು ಅರ್ಗವಾಲ್ ಮುಂದಾಗಿದ್ದಾರೆ.