ಮೊಬೈಲ್ ಫೋನ್ ಬ್ರ್ಯಾಂಡ್ ಪ್ರಚಾರ ಮಾಡುವುದಕ್ಕೋಸ್ಕರ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ರ ಫೋಟೋ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ ಸಚಿವರ ಸಹೋದರನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 26ರಂದು ಲಲಿತ್ ಅಗರ್ವಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ಲಲಿತ್ ಅಗರ್ವಾಲ್ ಉತ್ತರ ಪ್ರದೇಶದ ವೃತ್ತಿಪರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವ ಕಪಿಲ್ ದೇವ್ ಅಗರ್ವಾಲ್ರ ಸಹೋದರನಾಗಿದ್ದಾನೆ. ಈ ವಿಚಾರದಲ್ಲಿ ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕಪಿಲ್ದೇವ್ ಅಗರ್ವಾಲ್, ನನ್ನ ಸಹೋದರನನ್ನ ಅನಗತ್ಯವಾಗಿ ಟಾರ್ಗೆಟ್ ಮಾಡಲಾಗ್ತಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ನನ್ನ ಸಹೋದರ ಶೀಘ್ರದಲ್ಲೇ ಆರೋಪ ಮುಕ್ತರಾಗಲಿದ್ದಾರೆ ಎಂದು ಹೇಳಿದ್ರು. ಇನ್ನು ಈ ಪ್ರಕರಣವನ್ನ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ಈ ಪ್ರಕರಣ ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ತಲೆ ಎತ್ತಿದೆ ಅನ್ನೋದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ. ಈ ಪ್ರಕರಣವನ್ನ ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಿ ತೆರೆಮರೆಯಲ್ಲಿರುವ ಆರೋಪಿಗಳನ್ನೂ ಪತ್ತೆ ಹಚ್ಚಬೇಕಿದೆ ಅಂತಾ ಒತ್ತಾಯಿಸಿದ್ರು.