2018ರಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಗರ್ಭಿಣಿ ಮಹಿಳೆಗೆ ತಪ್ಪಾಗಿ ರಕ್ತ ವರ್ಗಾವಣೆ ಮಾಡಿದ ಕಾರಣ ಆಕೆ ಹೆಚ್ಐವಿ ಸೋಂಕಿತೆಯಾಗುವಂತೆ ಮಾಡಿತ್ತು. ರಕ್ತ ಹೀನತೆಯಿಂದ ಬಳಲುತ್ತಿದ್ದ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸತ್ತೂರು ಗ್ರಾಮದ ಮಹಿಳೆ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಚಾರ ದೇಶಮಟ್ಟದಲ್ಲಿ ಸುದ್ದಿ ಮಾಡಿತ್ತು.
ಯಾರೋ ಮಾಡಿದ ತಪ್ಪಿಗೆ ಮಹಿಳೆ ಏಡ್ಸ್ ರೋಗಕ್ಕೆ ಈಡಾಗುವಂತೆ ಮಾಡಿತ್ತು. ಆದರೆ ಆಕೆಗೆ ಜನಿಸಿದ ಮಗುವಿಗೆ 2019ರ ಜುಲೈನಲ್ಲಿ ಹೆಚ್ವಿಐ ಪರೀಕ್ಷೆ ನಡೆಸಲಾಗಿ ಆ ಮಗುವಿನ ವರದಿಯಲ್ಲಿ ಹೆಚ್ಐವಿ ನೆಗೆಟಿವ್ ಬಂದಿತ್ತು.
ಈ ಘಟನೆ ಬಳಿಕ ಸಂತ್ರಸ್ತೆಗೆ ಸೂಕ್ತ ಪರಿಹಾರ ನೀಡಬೇಕೆಂದು ಕೋರಿ ಕೋರ್ಟ್ಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಸರ್ಕಾರದ ಬಳಿ ಆಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ವಾಸಿಸಲು ಮನೆ ನೀಡುವಂತೆ ಸೂಚನೆ ನೀಡಿತ್ತು.
ಇದಾದ ಬಳಿಕ ಮತ್ತೊಮ್ಮೆ ನ್ಯಾಯಮೂರ್ತಿ ಎನ್. ಕಿರುಬಾಕರನ್ ಹಾಗೂ ಬಿ. ಪುಗಲೆಂಧಿ ನೇತೃತ್ವದ ಪೀಠದ ಮುಂದೆ ಹಾಜರಾದ ಸಂತ್ರಸ್ತೆ ಸಂಬಂಧ ಪಟ್ಟ ಇಲಾಖೆಯಿಂದ ನನಗೆ ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ಕೋರಿದ್ದಾಳೆ.
ನನ್ನ ಆರೋಗ್ಯ ದೃಷ್ಟಿಯಿಂದ ನಿತ್ಯ ಪೋಷಕಾಂಶಯುಕ್ತ ಆಹಾರ ಹಣ್ಣು – ಹಂಪಲನ್ನ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಅವೆಲ್ಲವನ್ನ ಭರಿಸುವ ಶಕ್ತಿ ನನಗಿಲ್ಲ ಎಂದು ಕೋರ್ಟ್ ಮುಂದೆ ಮಹಿಳೆ ಹೇಳಿಕೊಂಡಿದ್ದಳು.
ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಮಹಿಳೆ ಪ್ರತಿ ತಿಂಗಳು 7,500 ರೂಪಾಯಿ ಹಣವನ್ನ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೇ ತನ್ನ ಹಿಂದಿನ ನಿರ್ದೇಶನವನ್ನ ಪುನರುಚ್ಚರಿಸಿದ ಕೋರ್ಟ್ ಆಕೆಗೆ ಸೂಕ್ತವಾದ ಸರ್ಕಾರಿ ಕೆಲಸ ನೀಡುವಂತೆ ಹೇಳಿದೆ.